Virat Kohli to Rajat Patidar: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆರಂಭಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂದು ಹೊಸ ಜೆರ್ಸಿ, ವೆಬ್ಸೈಟ್ ನೊಂದಿಗೆ ನೂತನ ನಾಯಕನನ್ನು ಘೋಷಣೆ ಮಾಡಿದೆ.
18ನೇ ಆವೃತ್ತಿಯಲ್ಲಿ RCB ತಂಡವನ್ನು ನಾಯಕನಾಗಿ (RCB Captain) ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ. 2021 ರಿಂದಲೂ ಆರ್ಸಿಬಿ ತಂಡದ ಭಾಗವಾಗಿರುವ ರಜತ್ ಪಾಟಿದಾರ್ ಅವರನ್ನು ಈ ಬಾರಿ ಫ್ರಾಂಚೈಸಿ ರಿಟೈನ್ ಮಾಡಿಕೊಂಡು ತಂಡದಲ್ಲಿ ಉಳಿಸಿಕೊಂಡಿದೆ.
ಪಾಟಿದಾರ್ ಕೂಡ ತಂಡದ ಭರವಸೆಯ ಆಟಗಾರನಾಗಿದ್ದು ಹಲವಾರು ಸಂದರ್ಭಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲ್ಲಿಸಿರುವ ಉದಾರಣೆಗಳಿವೆ. ಬ್ಯಾಟಿಂಗ್ ಮೂಲಕ ಘರ್ಜಿಸುವ ಪಾಟಿದಾರ್ ಕ್ರೀಸ್ನಲ್ಲಿರುವ ವರೆಗೂ ಎದುರಾಳಿ ತಂಡಗಳನ್ನು ಕಾಡುತ್ತಾರೆ.
ಇದೀಗ ಫ್ರಾಂಚೇಸಿ ಪಾಟಿದಾರ್ಗೆ ನಾಯಕತ್ವದ ಹೊಸ ಜವಾಬ್ದಾರಿಯನ್ನು ನೀಡಿದ್ದು ಹೇಗೆ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ. ಏತನ್ಮಧ್ಯೆ, ಆರ್ಸಿಬಿ ಹೊಸ ನಾಯಕನ ಘೋಷಣೆ ಮಾಡುತ್ತಿದ್ದಂತೆ ಮಾಜಿ ನಾಯಕ ವಿರಾಟ್ ಕೊಹ್ಲಿ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.
ಕೊಹ್ಲಿ ಫಸ್ಟ್ ರಿಯಾಕ್ಷನ್:ರಜತ್ ಪಾಟಿದಾರ್ ನಾಯಕನಾಗಿ ಆಯ್ಕೆಗೊಳ್ಳುತ್ತಿದ್ದಂತೆ ಮಾಜಿ ನಾಯಕ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ. ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ರಜತ್ ನಾಯಕ ಸ್ಥಾನಕ್ಕೆ ಅರ್ಹರಾಗಿದ್ದಾರೆ. ನಾನು ಮತ್ತು ಆರ್ಸಿಬಿ ತಂಡ ಸದಾ ರಜತ್ ಅವರಿಗೆ ಬೆಂಬಲವನ್ನು ನೀಡುತ್ತೇವೆ. ಆರ್ಸಿಬಿ ನಿಮಗೆ ನಾಯಕನ ದೊಡ್ಡ ಜವಾಬ್ದಾರಿಯನ್ನು ನೀಡಿದೆ. RCB ಅಭಿಮಾನಿಗಳು ಕೂಡ ನೂತನ ನಾಯಕನಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕೊಹ್ಲಿಯ ಈ ಮಾತು ಆರ್ಸಿಬಿ ಅಭಿಮಾನಿಗಳ ಮನ ಗೆದ್ದಿದೆ.
ಸಮಾನ್ಯವಾಗಿ ವಿರಾಟ್ ಕೊಹ್ಲಿ ಯುವ ಆಟಗಾರರನ್ನು ಪ್ರೋತ್ಸಾಹಿಸುವಲ್ಲಿ ಸದಾ ಮುಂದಿರುತ್ತಾರೆ. ಇದೀಗ ಪಾಟಿದಾರ್ಗೂ ಬೆಂಬಲ ನೀಡಿ ಮತ್ತು ತಮ್ಮ ಅಭಿಮಾನಿಗಳಿಗೂ ಬೆಂಬಲ ನೀಡುವಂತೆ ಕೋರಿದ್ದು ಇದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ರಜತ್ ಐಪಿಎಲ್ ದಾಖಲೆ:ಈ ವರೆಗೂ ಆರ್ಸಿಬಿ ತಂಡದ ಪರ ರಜತ್ ಪಾಟಿದಾರ್ ಒಟ್ಟು 27 ಪಂದ್ಯಗಳನ್ನು ಆಡಿದ್ದಾರೆ. 24 ಇನ್ನಿಂಗ್ಸ್ಗಳಲ್ಲಿ 34.74ರ ಸರಾಸರಿಯಲ್ಲಿ ಒಟ್ಟು 779 ರನ್ ಕಲೆ ಹಾಕಿದ್ದಾರೆ. ಅದರಲ್ಲಿ 1ಶತಕ, 7 ಅರ್ಧಶತಕ ಸೇರಿವೆ. 112ರನ್ ಐಪಿಎಲ್ನಲ್ಲಿ ಇವರ ಬೆಸ್ಟ್ ಇನ್ನಿಂಗ್ಸ್ ಆಗಿದೆ.
ಐಪಿಎಲ್ 2025ರ RCB ತಂಡ:ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಟಿಮ್ ಡೇವಿಡ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ರಜತ್ ಪಾಟಿದಾರ್ (ನಾಯಕ), ಕೃನಾಲ್ ಪಾಂಡ್ಯ, ಮನೋಜ್ ಭಾಂಡಗೆ, ಮೋಹಿತ್ ರಥಿ, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ವಪ್ನಿಲ್ ಸಿಂಗ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಲುಂಗಿ ಎಂಗಿಡಿ, ರಸಿಕ್ ದಾರ್ ಸಲಾಂ, ಸುಯಶ್ ಶರ್ಮಾ, ಯಶ್ ದಯಾಳ್, ನುವಾನ್ ತುಷಾರ, ಅಭಿನಂದನ್ ಸಿಂಗ್.
ಇದನ್ನೂ ಓದಿ:RCB ಹೊಸ ನಾಯಕನ ಘೋಷಣೆ: ಕೊಹ್ಲಿ ಅಲ್ಲ, ಸ್ಟಾರ್ ಆಟಗಾರನಿಗೆ ಒಲಿಯಿತು ಅದೃಷ್ಟ!