ಬಾರ್ಬಡೋಸ್: ಟಿ-20 ವಿಶ್ವಕಪ್ ಪೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಒಂದೆಡೆ ತಂಡದ ಆಟಗಾರರು ವಿಫಲವಾಗುತ್ತಿದ್ದರೆ ಮತ್ತೊಂದೆಡೆ ಅವರು ಗೆಲುವಿಗಾಗಿ ಕ್ರೀಸ್‌ನಲ್ಲಿ ಬಲವಾಗಿ ನಿಂತರು. ಐಪಿಎಲ್ ಬಳಿಕ ಚುಟುಕು ಸಮರ ಪ್ರವೇಶಿಸಿದ ಕೊಹ್ಲಿ, ಟೂರ್ನಿ ಅಂತಿಮ ಘಟ್ಟ ತಲುಪುವರೆಗೂ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಗುಂಪು ಹಂತದ 3 ಪಂದ್ಯಗಳಲ್ಲಿ ಕೇವಲ 5 ರನ್ ಗಳಿಸಿ ಟ್ರೋಲ್ ದಾಳಿಗೆ ಗುರಿಯಾಗಿದ್ದರು. ಸೂಪರ್-8 ಹಂತದಲ್ಲೂ ಅವರ ಪ್ರದರ್ಶನ ಸೀಮಿತವಾಗಿತ್ತು. ಸೆಮಿಫೈನಲ್‌ನಲ್ಲೂ ಮತ್ತದೇ ನಿರಾಶಾಯದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಸೆಮಿಫೈನಲ್ ಪಂದ್ಯದ ಬಳಿಕ ಈ ಕುರಿತು ನಾಯಕ ರೋಹಿತ್ ಮತ್ತು ಕೋಚ್ ದ್ರಾವಿಡ್ ಮಾತನಾಡುತ್ತಾ, "ವಿರಾಟ್ ಸದ್ಯ ಯಾವ ಮಟ್ಟದಲ್ಲಿದ್ದಾರೆ ಎಂಬುದು ನಮಗೆ ಗೊತ್ತು. ಪ್ರಮುಖ ಪಂದ್ಯಗಳಲ್ಲಿ ಹೇಗೆ ಆಡಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಬಹುಶಃ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಫೈನಲ್‌ಗೆ ಉಳಿಸಿದ್ದಾರೆ" ಎಂದಿದ್ದರು.
ಈ ಭರವಸೆಯ ಮಾತುಗಳಿಗೆ ತಕ್ಕಂತೆ ಕೊಹ್ಲಿ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಎಂದಿನಂತೆ ಆತ್ಮವಿಶ್ವಾಸದಿಂದ ಇನಿಂಗ್ಸ್ ಆರಂಭಿಸಿದ ಕೊಹ್ಲಿ, ನಿಧಾನಗತಿಯಿಂದ ಆಡುತ್ತಾ, ಅರ್ಧ ಶತಕದ ಗಡಿ ದಾಟಿದ ಮೇಲೆ ರನ್ ವೇಗ ಹೆಚ್ಚಿಸಿಕೊಂಡರು. ತಂಡ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಸರೆಯಾದರು. ಹೀಗಾಗಿ, ಕೊಹ್ಲಿ ವಿಶೇಷ ರಿಸ್ಕ್ ತೆಗೆದುಕೊಳ್ಳಲಿಲ್ಲ. ಕ್ರೀಸ್‌ನಲ್ಲಿ ಬೇರುಬಿಟ್ಟಂತೆ ಜವಾಬ್ದಾರಿಯುತವಾಗಿ ಬ್ಯಾಟಿ ಬೀಸಿದರು. ಇನ್ನೊಂದು ತುದಿಯಲ್ಲಿ ಅಕ್ಷರ್ ಭರ್ಜರಿ ಹೊಡೆತಗಳ ಮೂಲಕ ರನ್ ಗಳಿಸುತ್ತಿದ್ದರು. ಪಂದ್ಯ ಕೊನೆಯ ಕೆಲವು ಓವರ್‌ಗಳಿಗೆ ಬಂದಾಗ ಕೊಹ್ಲಿ, ಆಕ್ರಮಣ ಆಟಕ್ಕೆ ಪ್ರಯತ್ನಿಸಿದರು.