ದುಬೈ:ವಿಶ್ವಕಪ್ ಸೇರಿದಂತೆ ಏಕದಿನದಲ್ಲಿ ರನ್ ಶಿಖರವನ್ನೇ ಕಟ್ಟಿದ್ದ ಕ್ರಿಕೆಟ್ನ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಐಸಿಸಿ ಪುರುಷರ 2023ನೇ ಸಾಲಿನ ವರ್ಷದ 'ಏಕದಿನ ಕ್ರಿಕೆಟಿಗ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಅವರ ನಾಲ್ಕನೇ ಪ್ರಶಸ್ತಿಯಾಗಿದೆ.
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ, ವಿರಾಟ್ ಕೊಹ್ಲಿ ಟೂರ್ನಿಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅಲ್ಲದೇ, ಯಾವುದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ವಿಶ್ವಕಪ್ಪ್ನಲ್ಲಿ ವಿರಾಟ್ ಆಡಿದ 11 ಪಂದ್ಯಗಳಲ್ಲಿ 765 ರನ್ ಬಾರಿಸಿದ್ದಾರೆ. ಇದರಲ್ಲಿ 9 ಅರ್ಧಶತಕ ಬಾರಿಸಿದ್ದಾರೆ. ಜೊತೆಗೆ ಮೂರು ಶತಕಗಳೂ ಇವೆ. ಇದು ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತವಾಗಿದೆ. 2003 ರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 700 ಕ್ಕೂ ಅಧಿಕ ರನ್ ಗಳಿಸಿದ ದಾಖಲೆ ಮುರಿದಿದ್ದರು.
ಕೊಹ್ಲಿಯ ಅಸಾಧಾರಣ ಲಯಕ್ಕೆ ಅಂಕಿ - ಅಂಶಗಳೇ ಸಾಕ್ಷಿ. 95.62 ಸರಾಸರಿ, 90.31 ಸ್ಟ್ರೈಕ್ರೇಟ್ ಹೊಂದಿದ್ದ ಬ್ಯಾಟಿಂಗ್ ಕಿಂಗ್ ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್‌ನಲ್ಲಿ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸೆಮಿ ಫೈನಲ್‌ನಲ್ಲಿ ಏಕದಿನ ಮಾದರಿಯಲ್ಲಿ ಅವರ ದಾಖಲೆಯ 50ನೇ ಶತಕವನ್ನು ಪೂರ್ಣಗೊಳಿಸಿದ್ದರು.