ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. 3 ಪಂದ್ಯಗಳ ಸರಣಿಯಲ್ಲಿ ಈ ಇಬ್ಬರು ಬ್ಯಾಟರ್ಗಳು ಕೇವಲ ಒಂದು ಅರ್ಧಶತಕ ಸಿಡಿಸಿರುವುದು ಬಿಟ್ಟರೆ ಉಳಿದ ಇನ್ನಿಂಗ್ಸ್ನಲ್ಲಿ ಸತತವಾಗಿ ವೈಫಲ್ಯ ಕಂಡಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳು ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೇ, ಕೆ.ಎಲ್.ರಾಹುಲ್ಗೆ ಒಂದು ಲೆಕ್ಕ, ವಿರಾಟ್ ಮತ್ತು ರೋಹಿತ್ಗೆ ಒಂದು ಲೆಕ್ಕನಾ ಎಂದು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕೆ.ಎಲ್.ರಾಹುಲ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಅವರು, ಎರಡನೇ ಇನ್ನಿಂಗ್ಸ್ನಲ್ಲಿ 12 ರನ್ಗಳಿಗೆ ಔಟ್ ಆಗಿದ್ದರು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ರಾಹುಲ್ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.
ಇದೀಗ ಎರಡು ಮತ್ತು ಮೂರನೇ ಟೆಸ್ಟ್‌ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ತೋರಿರುವ ಹಿನ್ನೆಲೆಯಲ್ಲಿ ಕ್ರೀಡಾಪ್ರಿಯರು ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ. ಈ ಇಬ್ಬರು ಎರಡನೇ ಟೆಸ್ಟ್‌ನಲ್ಲಿ ಕನಿಷ್ಠ 30 ರನ್ಗಳಿಸಲು ಸಾಧ್ಯವಾಗದೆ ಪೆವಿಲಿಯನ್ ಸೇರಿದ್ದರು. ಭಾರತ 113 ರನ್ಗಳಿಂದ ಸೋಲು ಅನುಭವಿಸಿತ್ತು.
ಇದೀಗ ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಕ್ತಾಯಗೊಂಡ 3ನೇ ಪಂದ್ಯದಲ್ಲೂ ವಿರಾಟ್ ಮತ್ತು ರೋಹಿತ್ ಶರ್ಮಾ ಪ್ರದರ್ಶನ ನೀಡುವಲ್ಲಿ ಮತ್ತೆ ವಿಫಲರಾಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ 18 ರನ್, ವಿರಾಟ್ 4 ರನ್ಗಳಿಸಿ ನಿರ್ಗಮಿಸಿದ್ದರೆ, ಎರಡನೇ ಇನ್ನಿಂಗ್ಸ್ನಲ್ಲಿ ರೋಹಿತ್ ಮತ್ತು ವಿರಾಟ್ ಕ್ರಮವಾಗಿ 11 ಮತ್ತು 1 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು.