ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಪ್ರಾರಂಭಕ್ಕೂ ಮೊದಲೇ, ರಾಜಸ್ಥಾನ್ ರಾಯಲ್ಸ್ ತಂಡ ಭಾರತದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರನ್ನು ತಂಡದ ಹೊಸ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಆಯ್ಕೆಗಾರರಾಗಿದ್ದ ರಾಥೋಡ್ ಅವರ ಒಪ್ಪಂದವು ಜೂನ್‌ನಲ್ಲಿ ನಡೆದ ಟಿ -20 ವಿಶ್ವಕಪ್ ಗೆಲುವಿನೊಂದಿಗೆ ಮುಕ್ತಾಯಗೊಂಡಿತ್ತು. ಆದರೆ, ಈಗ ಮತ್ತೊಮ್ಮೆ ಅವರು ರಾಹುಲ್ ದ್ರಾವಿಡ್ ಜೊತೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಖುಷಿ ಹಂಚಿಕೊಂಡ ರಾಥೋಡ್:ರಾಜಸ್ಥಾನ ತಂಡದ ನೂತನ ಫ್ರಾಂಚೈಸಿ ಬಿಡುಗಡೆ ಮಾಡಿದ ಬಳಿಕ ಮಾತನಡಿದ ರಾಥೋಡ್, ರಾಜಸ್ಥಾನ ಕುಟುಂಬದ ಭಾಗವಾಗಿರುವುದು ಖುಷಿ ತಂದಿದೆ. ಮತ್ತೊಮ್ಮೆ ದ್ರಾವಿಡ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅಲ್ಲದೇ ಯುವ ಕ್ರಿಕೆಟಿಗರೊಂದಿಗೂ ಕೆಲಸ ಮಾಡುವುದು ಸಂತೋಷದ ವಿಷಯವಾಗಿದೆ. ತಂಡಕ್ಕೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ ಜತೆಗೆ ಮಾಜಿ ಕಪ್ ವಿಜೇತರನ್ನು ಮತ್ತೊಮ್ಮೆ ಚಾಂಪಿಯನ್ಶಿಪ್ ಪಟ್ಟಕ್ಕೆ ಏರಲು ದುಡಿಯುವೆ ಎಂದಿದ್ದಾರೆ.
ಇವರ ಗರಡಿಯಲ್ಲಿ ಬೆಳದವರು ಮಿಂಚುತ್ತಿದ್ದಾರೆ;2019 ರಿಂದ 2024ರವರೆಗೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿದ್ದ ರಾಥೋಡ್ ಅವರು ಭಾರತಕ್ಕಾಗಿ 6 ಟೆಸ್ಟ್ ಮತ್ತು 7 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ ಇವರ ಗರಡಿಯಲ್ಲಿ ತರಬೇತಿ ಪಡೆದಿರುವ ರಿಷಭ್ ಪಂತ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರಂತಹ ಬ್ಯಾಟ್ಸ್‌ಮನ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚುತ್ತಿದ್ದಾರೆ.