ಕರ್ನಾಟಕ

karnataka

ETV Bharat / sports

ಹೀಗೆ ಮಾಡಿದ್ದಕ್ಕೆ ಯುಎಸ್​ ತಂಡಕ್ಕೆ 5 ರನ್​ ದಂಡ; ಏನಿದು ಸ್ಟಾಪ್-ಕ್ಲಾಕ್ ನಿಯಮ? - Penalty For USA - PENALTY FOR USA

ಟಿ20 ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲಿ ಅತಿಥೇಯ ಅಮೆರಿಕವು 5 ರನ್​ಗಳ ದಂಡಕ್ಕೆ ಗುರಿಯಾಯಿತು. ಯುಎಸ್​ಗೆ ದಂಡ ವಿಧಿಸಿದ್ದು ಯಾಕೆ? ಎಂಬ ಮಾಹಿತಿ ಇಲ್ಲಿದೆ.

USA team
ಯುಎಸ್​ ತಂಡ (Photo: IANS)

By ANI

Published : Jun 13, 2024, 12:30 PM IST

ನ್ಯೂಯಾರ್ಕ್​:ಭಾರತ ತಂಡವು ಸತತ ಮೂರನೇ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಟೂರ್ನಿಯ ಸೂಪರ್​-8 ಹಂತಕ್ಕೆ ಎಂಟ್ರಿಕೊಟ್ಟಿದೆ. ರೋಹಿತ್​ ಶರ್ಮಾ ಪಡೆಯು ಅಮೆರಿಕ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ದಾಖಲಿಸಿತು. ಚೇಸಿಂಗ್​ ವೇಳೆ ಅಮೆರಿಕ ಮಾಡಿದ ಪ್ರಮಾದದಿಂದಾಗಿ ಭಾರತದ ಸ್ಕೋರ್​ಗೆ ಉಚಿತವಾಗಿ 5 ರನ್​ ಸೇರ್ಪಡೆಯಾದವು.

ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತಕ್ಕೆ 111 ರನ್​ ಗುರಿ ಬೆನ್ನಟ್ಟುವುದು ಸುಲಭವಾಗಿರಲಿಲ್ಲ. ಈ ವೇಳೆ ಟೀಂ ಇಂಡಿಯಾಗೆ 5 ರನ್​ಗಳು ಬೋನಸ್​ ಎಂಬಂತೆ​ ಸಿಕ್ಕವು. ಅದು ಹೇಗೆ ಎಂಬ ಬಗ್ಗೆ ಆರಂಭದಲ್ಲಿ ಕೆಲಕಾಲ ಗೊಂದಲ ಕಂಡುಬಂದರೂ ಸಹ ಆ ಬಳಿಕ ಸ್ಪಷ್ಟತೆ ಸಿಕ್ಕಿತು. ಅನಿರೀಕ್ಷಿತ 5 ರನ್‌ಗಳು ಯುಎಸ್​ ತಂಡದ ಮೇಲೆ ಒತ್ತಡ ಹೇರಿತು. ಭಾರತ 7 ವಿಕೆಟ್​ಗಳ ಗೆಲುವು ಸಾಧಿಸಿತು.

ಭಾರತಕ್ಕೆ 5 ರನ್ ನೀಡಿದ್ದು ಯಾಕೆ?:ಪಂದ್ಯದ 15 ಓವರ್‌ಗಳ ಅಂತ್ಯಕ್ಕೆ ಟೀಂ ಇಂಡಿಯಾಗೆ 30 ಎಸೆತಗಳಲ್ಲಿ 35 ರನ್‌ ಅಗತ್ಯವಿತ್ತು. ಆದರೆ, ಮತ್ತೊಂದು ಓವರ್ ಆರಂಭಿಸುವಲ್ಲಿ ಯುಎಸ್​ ತಂಡ ತಡ ಮಾಡಿತು. ಹೀಗಾಗಿ, 60 ಸೆಕೆಂಡುಗಳ ವಿಳಂಬದ ಹಿನ್ನೆಲೆಯಲ್ಲಿ 5 ರನ್‌ಗಳ ದಂಡಕ್ಕೆ ಗುರಿಯಾಯಿತು. ಅದಾಗಲೇ ಎರಡು ಸಲ ಓವರ್​ಗಳ ನಡುವೆ ತಡ ಮಾಡಿದ್ದ ಯುಎಸ್​ ತಂಡ ಮೂರನೇ ಬಾರಿಗೆ ತಪ್ಪನ್ನು ಮರುಕಳಿಸಿದ್ದರಿಂದ ನಿಯಮದ ಪ್ರಕಾರ ದಂಡ ವಿಧಿಸಲಾಯಿತು. ಕಳೆದ ವರ್ಷ ಐಸಿಸಿ ಜಾರಿಗೆ ತಂದ ಹೊಸ ನಿಯಮ ಅಮೆರಿಕಕ್ಕೆ ತಲೆನೋವು ತಂದಿತು. ಈ ನಿಯಮವನ್ನು ಸ್ಟಾಪ್ ಕ್ಲಾಕ್​ ರೂಲ್ (stop-clock rule)​ ಎಂದು ಕರೆಯಲಾಗುತ್ತದೆ.

ಏನಿದು ನಿಯಮ?:ಕಳೆದ ವರ್ಷ ಡಿಸೆಂಬರ್‌ನಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಟಾಪ್-ಕ್ಲಾಕ್ ನಿಯಮ ಪ್ರಯೋಗಿಸಲಾಗಿದೆ. ಬಳಿಕ ಏಪ್ರಿಲ್ 2024ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದು ಜಾರಿಗೆ ಬಂದಿದೆ. ಸಮಯದ ಬಳಕೆಯನ್ನು ನಿಯಂತ್ರಣ ಮಾಡಲು ಇದರ ಬಳಕೆಯಾಗುತ್ತಿದೆ. ಓವರ್‌ಗಳ ನಡುವೆ, ತಂಡಗಳು ಮುಂದಿನ ಓವರ್ ಪ್ರಾರಂಭಿಸುವಾಗ 60 ಸೆಕೆಂಡ್​ಗಳ ಕಾಲ ಮಾತ್ರ ಅವಕಾಶವಿದೆ. ಫೀಲ್ಡಿಂಗ್​ ವೇಳೆ ಈ ಅವಧಿಯನ್ನು ಮೀರಿ ಸಮಯ ವ್ಯಯಿಸಿದರೆ, ಎರಡು ಬಾರಿ ವಾರ್ನಿಂಗ್​ ಮಾಡಲಾಗುತ್ತದೆ. ಬಳಿಕವೂ ಮೂರನೇ ಬಾರಿಗೆ ತಪ್ಪು ಮರುಕಳಿಸಿದರೆ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಮುಂದಿನ ಪ್ರತಿಯೊಂದು ಉಲ್ಲಂಘನೆಗೂ ಕೂಡ 5 ರನ್ ಪೆನಾಲ್ಟಿ ವಿಧಿಸಲಾಗುತ್ತದೆ.

ಇದೀಗ ಭಾರತದ ವಿರುದ್ಧ ದಂಡ ಅನುಭವಿಸಿದ ಯುಎಸ್​ ತಂಡ, ಎದುರಾಳಿಗೆ ಗೆಲುವನ್ನು ಇನ್ನಷ್ಟು ಸುಲಭವಾಗಿಸಿತು. ಹೀಗೆ 5 ರನ್​ ದಂಡಕ್ಕೆ ಗುರಿಯಾದ ಮೊದಲ ತಂಡವಾದ ಕುಖ್ಯಾತಿ ಯುಎಸ್​ ತಂಡದ್ದಾಯಿತು.

ಇದನ್ನೂ ಓದಿ:ಟಿ20 ವಿಶ್ವಕಪ್‌: ಅರ್ಷದೀಪ್ ಮಾರಕ ದಾಳಿ; ಅಮೆರಿಕ​ ಮಣಿಸಿ ಸೂಪರ್​​-8ಕ್ಕೆ ಭಾರತ ಲಗ್ಗೆ - India Enters super 8

ABOUT THE AUTHOR

...view details