ಬ್ಲೋಮ್‌ಫಾಂಟೈನ್: ನಾಯಕ ಉದಯ್ ಸಹರನ್ ಮತ್ತು ಸಚಿನ್ ದಾಸ್ ಅವರ ಅಮೋಘ ಶತಕ ಮತ್ತು ಸೌಮಿ ಪಾಂಡೆ ಅವರ ಆಕ್ರಮಣಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತದ ಕಿರಿಯರ ತಂಡವು ಐಸಿಸಿ ಪುರುಷರ ಅಂಡರ್ -19 ವಿಶ್ವಕಪ್ ಸೆಮಿಫೈನಲ್‌ನಲ್ಲಿ ನೇಪಾಳವನ್ನು ಸೋಲಿಸಿತು. ಬ್ಲೋಮ್ಫಾಂಟೈನ್ನ ಮಂಗೌಂಗ್ ಓವಲ್ ಮೈದಾನದಲ್ಲಿ ನಡೆದ ತನ್ನ ದ್ವಿತೀಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ಎದುರಾಳಿ ನೇಪಾಳವನ್ನು 132 ರನ್ನುಗಳಿಂದ ಸೋಲಿಸಿದ ಭಾರತ ಸೆಮಿಫೈನಲ್ ಪ್ರವೇಶಿಸಿದೆ.
ಒಟ್ಟು ಐದು ಪಂದ್ಯಗಳನ್ನು ಆಡಿರುವ ಉದಯ್ ಸಹರನ್ ನೇತೃತ್ವದ ಭಾರತೀಯ ಕಿರಿಯರ ತಂಡ, ಐದು ತಂಡಗಳನ್ನು ಸೋಲಿಸಿದ್ದು, ಇಲ್ಲಿ ಗಮನಾರ್ಹ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ನಾಯಕ ಉದಯ್ ಸಹಾರಣ್ ಮತ್ತು ಸಚಿನ್ ದಾಸ್ ಅವರ ಆಕರ್ಷಕ ಶತಕದ ಸಾಹಸದಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 297 ರನ್ ಕೂಡಿ ಹಾಕಿತು. ಭಾರತ ನೀಡಿದ ಈ ಬೃಹತ್ ಸವಾಲು ಬೆನ್ನು ಹತ್ತಿದ ನೇಪಾಳದ ಕಿರಿಯರ ತಂಡ, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರಂಭದಲ್ಲಿ ಚಾಣಾಕ್ಷತನದಿಂದ ಆಡಿದ ನೇಪಾಳ, ಬಳಿಕ ಯಾವುದೇ ಆಟಗಾರರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಭಾರತದ ಸೌಮಿ ಪಾಂಡೆ ಅವರ ಮಾರಕ ಬೌಲಿಂಗ್ ದಾಳಿಗೆ ಒಬ್ಬೊಬ್ಬರೇ ಪೆವಿಲಿಯನ್ ಪರೇಡ್ ನಡೆಸಿದರು. ವೇಗಿ ರಾಜ್ ಲಿಂಬಾನಿ, ಅರ್ಶಿನ್ ಕುಲಕರ್ಣಿ ಮತ್ತು ಮುರುಗನ್ ಅಭಿಷೇಕ್ ಅವರ ಅಮೋಘ ಬೌಲಿಂಗ್ ದಾಳಿ ಕೂಡ ತಂಡಕ್ಕೆ ವರದಾನವಾಯಿತು. ಈ ಪಂದ್ಯದಲ್ಲಿ ಭಾರತದ ಪರ ಸೌಮ್ಯ ಪಾಂಡೆ 10 ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಒಟ್ಟು ಐದು ಪಂದ್ಯಗಳಲ್ಲಿ 12 ವಿಕೆಟ್ ಪಡೆದ ಪಾಂಡೆ, ದಕ್ಷಿಣ ಆಫ್ರಿಕಾದ ಪ್ರಭಾವಿ ವೇಗಿ ಕ್ವೆನಾ ಮಫಕಾ (18 ವಿಕೆಟ್) ಬಳಿಕ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.