Border Gavaskar Trophy:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಇದೇ ತಿಂಗಳು ಅಂದರೆ ನ.22 ರಿಂದ ಪ್ರಾರಂಭವಾಗಲಿದೆ. ಈಗಾಗಲೇ ಭಾರತ ತಂಡ ಆಸ್ಟ್ರೇಲಿಯಾಗೆ ತೆರಳಿದ್ದು, ಅಭ್ಯಾಸದಲ್ಲಿ ನಿರತವಾಗಿದೆ. ಟೀಂ ಇಂಡಿಯಾ ಪಾಲಿಗೆ ಈ ಸರಣಿ ಮಹತ್ವದಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪ್ರವೇಶಿಸಲು ಭಾರತ 4 ಪಂದ್ಯಗಳನ್ನು ಗೆಲ್ಲಲೇಬೇಕಿದೆ.
ಮತ್ತೊಂದೆಡೆ ಎರಡು ದಶಕಗಳಿಗೂ ಹೆಚ್ಚು ಇತಿಹಾಸವಿರುವ ಈ ಸರಣಿಯಲ್ಲಿ ಹಲವು ದಾಖಲೆಗಳು ಮತ್ತು ಐತಿಹಾಸಿಕ ಇನ್ನಿಂಗ್ಸ್‌ಗಳೂ ದಾಖಲಾಗಿವೆ. ಇದುವರೆಗೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಹಾಗೂ ವಿಕೆಟ್ ಪಡೆದ ಆಟಗಾರರು ಯಾರು ಎಂಬುದರ ಮಾಹಿತಿಯನ್ನು ತಿಳಿಯೋಣ..
ಅತಿ ಹೆಚ್ಚು ರನ್ಗಳಿಸಿದ ಟಾಪ್ 5 ಆಟಗಾರರು
ಸಚಿನ್ ತೆಂಡೂಲ್ಕರ್ (Gatty Images) - ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ಗಳಿಸಿದ ದಾಖಲೆ ಟೀಂ ಇಂಡಿಯಾದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಸಚಿನ್ ಒಟ್ಟು 39 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 55ರ ಸರಾಸರಿಯಲ್ಲಿ 3,630 ರನ್ ಗಳಿಸಿದ್ದಾರೆ.
ಸಚಿನ್, ಪಾಂಟಿಂಗ್, ಅಶ್ವಿನ್ (Getty Images, AP) - ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಇದ್ದಾರೆ. ಅವರು 29 ಪಂದ್ಯಗಳಲ್ಲಿ 54.36ರ ಸರಾಸರಿಯಲ್ಲಿ 2,555ರನ್ ಗಳಿಸಿದ್ದಾರೆ.
ವಿವಿಎಸ್ ಲಕ್ಷ್ಮಣ್ (IANS) - ಭಾರತದ ಮತ್ತೊಬ್ಬ ದಿಗ್ಗಜ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ನಂತರದ ಸ್ಥಾನದಲ್ಲಿದ್ದಾರೆ. ಅವರು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಒಟ್ಟು 29 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 49.67ರ ಸರಾಸರಿಯಲ್ಲಿ 2,437 ರನ್ ಗಳಿಸಿದ್ದಾರೆ.
- ವಾಲ್ ಆಫ್ ಕ್ರಿಕೆಟ್ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ರಾಹುಲ್ ಡ್ರಾವಿಡ್ ಕೂಡ ಅಗ್ರ 5ರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಟ್ಟು 32 ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯಗಳನ್ನು ಆಡಿದ್ದಾರೆ. 39.68ರ ಸರಾಸರಿಯಲ್ಲಿ 2,143 ರನ್ ಗಳಿಸಿದ್ದಾರೆ.
- ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತೇಶ್ವರ ಪೂಜಾರ 25 ಟೆಸ್ಟ್ ಪಂದ್ಯಗಳಲ್ಲಿ 49.78 ಸರಾಸರಿಯಲ್ಲಿ 2074 ರನ್ ಗಳಿಸಿದ್ದಾರೆ. ಈ ಮೂಲಕ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದ 5 ಬೌಲರ್ಗಳು
- ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ ಬೌಲರ್ ಎನಿಸಿಕೊಂಡಿದ್ದಾರೆ. ಈ ಸ್ಪಿನ್ನರ್ 26 ಪಂದ್ಯಗಳಲ್ಲಿ 32.40 ಸರಾಸರಿಯಲ್ಲಿ 116 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
- ನಂತರದ ಸ್ಥಾನದಲ್ಲಿದೆ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 22 ಪಂದ್ಯಗಳಲ್ಲಿ 114 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
- ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಡೇಂಜರಸ್ ಸ್ಪಿನ್ನರ್ ಅನಿಲ್ ಕುಂಬ್ಳೆ 20 ಟೆಸ್ಟ್ ಪಂದ್ಯಗಳನ್ನು ಆಡಿ 111 ವಿಕೆಟ್ ಉರುಳಿಸಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
- ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಸರಣಿಯಲ್ಲಿ ಹರ್ಭಜನ್ ಸಿಂಗ್ 18 ಪಂದ್ಯಗಳಿಂದ 95 ವಿಕೆಟ್ ಪಡೆದಿದ್ದರು.
- ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಸರಣಿಯಲ್ಲಿ 16 ಪಂದ್ಯಗಳನ್ನಾಡಿರುವ ಜಡ್ಡು ಒಟ್ಟು 85 ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ:140 ಕೋಟಿ ಭಾರತೀಯರ ಕನಸು ನುಚ್ಚುನೂರಾದ ದಿನ: ಎಂದಿಗೂ ಮಾಸದ ಆ ಕಹಿ ಘಟನೆಗೆ ಒಂದು ವರ್ಷ!