ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ 4ನೇ ದಿನದಾಟ ಮುಕ್ತಾಯಗೊಂಡಿದೆ. ಇದರ ಜೊತೆ ಮೊದಲ ಇನ್ನಿಂಗ್ಸ್ ಕೂಡ ಮುಗಿದಿದ್ದು ಟೀಂ ಇಂಡಿಯಾ 285/9 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇದರೊಂದಿಗೆ ಬಾಂಗ್ಲಾ ವಿರುದ್ಧ 52 ರನ್‌ಗಳ ಮುನ್ನಡೆ ಸಾಧಿಸಿದೆ. ಆದರೆ, ಈ ಇನ್ನಿಂಗ್ಸ್‌ನಲ್ಲಿ ಯುವ ವೇಗಿ ಆಕಾಶ್ ದೀಪ್ ಕಣ್ಸೆಳೆಯುವ ಸಿಕ್ಸರ್‌ಗಳನ್ನು ಸಿಡಿಸಿ ಎಲ್ಲರನ್ನು ಅಚ್ಚರಿ ಗೊಳಿಸಿದ್ದಾರೆ.
ಆಕಾಶ್ ದೀಪ್ ಗಗನಚುಂಬಿ ಸಿಕ್ಸರ್ ಸಿಡಿಸಿ ಮಿಂಚು:ಹೌದು, 9ನೇ ವಿಕೆಟ್ಗೆ ಬ್ಯಾಟಿಂಗ್ ಬಂದ ಆಕಾಶ್ ದೀಪ್, ಶಕೀಬ್ ಅಲ್ ಹಸನ್ ಎಸೆದ 34ನೇ ಓವರ್‌ನಲ್ಲಿ ಸತತ ಎರಡು ಗಗನಚುಂಬಿ ಸಿಕ್ಸರ್ ಸಿಡಿಸಿ ಗಮನ ಸೆಳೆದರು. ಆಕಾಶ್ ಈ ಓವರ್ನ ಎರಡು ಮತ್ತು ಮೂರನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟುವಲ್ಲಿ ಯಶಸ್ವಿಯಾದರು. ಆಕಾಶ್ ದೀಪ್ ಅವರ ಈ ಸಿಕ್ಸರ್‌ಗಳನ್ನು ನೋಡಿ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತಿದ್ದ ಕೋಚ್ ಗಂಭೀರ್, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಅಚ್ಚರಿಗೊಂಡರು.
ಆದರೆ ಈ ಇನ್ನಿಂಗ್ಸ್‌ನಲ್ಲಿ ಆಕಾಶ್ ಬಳಸಿದ್ದ ಬ್ಯಾಟ್ ವಿರಾಟ್ ಕೊಹ್ಲಿ ಉಡುಗೊರೆಯಾಗಿ ನೀಡಿದ್ದು ಎಂದು ಅಭಿಮಾನಿಗಳು ಹೇಳಲಾರಂಭಿಸಿದ್ದಾರೆ. ಕಾರಣ ಕ್ರಿಕೆಟ್ನಲ್ಲಿ MRF ಬ್ಯಾಟ್ ಬಳಕೆ ಮಾಡುವುದು ವಿರಾಟ್ ಕೊಹ್ಲಿ ಮಾತ್ರ. ಹಾಗಾಗಿ ಕೆಲ ಅಭಿಮಾನಿಗಳು ಆಕಾಶ್ ಅವರನ್ನು ಹೊಗಳುತ್ತಿದ್ದಾರೆ.
ಇದನ್ನೂ ಓದಿ:ಕಠಿಣ 4ನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು: 2ನೇ ಸ್ಥಾನದಲ್ಲಿ ಕನ್ನಡಿಗ! - HIGHEST SCORE 4TH INNINGS
ಇತ್ತೀಚೆಗೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಅನ್ನು ಆಕಾಶ್ ದೀಪ್ಗೆ ಉಡುಗೊರೆಯಾಗಿ ನೀಡಿದ್ದರು. ವಿರಾಟ್‌ನಿಂದ ಉಡುಗೊರೆಯಾಗಿ ಬ್ಯಾಟ್ ಸ್ವೀಕರಿಸಿದ ವಿಷಯವನ್ನು ಸ್ವತಃ ಆಕಾಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವೇಳೆ, ಆ ಬ್ಯಾಟ್‌ನಿಂದ ಎಂದಿಗೂ ಕ್ರಿಕೆಟ್ ಆಡುವುದಿಲ್ಲ ಎಂದೂ ಹೇಳಿದ್ದರು.
'ವಿರಾಟ್ ಭಾಯ್ ನನಗೆ ಬ್ಯಾಟ್ ಉಡುಗೊರೆಯಾಗಿ ನೀಡಿದ್ದಾರೆ. ನಾನು ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಗಮನಿಸಿ ನನ್ನಲ್ಲಿ ಬಂದು ನಿಮಗೆ ಬ್ಯಾಟ್ ಬೇಕಾ?’ ಎಂದು ಕೇಳಿದರು. ಅದಕ್ಕೆ ನಾನು ಬೇಕು ಎಂದೇ. ಆಗ ಅವರು ‘ನೀವು ಯಾವ ಬ್ಯಾಟ್‌ನಲ್ಲಿ ಅಭ್ಯಾಸ ಮಾಡುತ್ತೀರಿ?’ ಎಂದು ಕೇಳಿದರು. ನಾನು ನಗುತ್ತಲೇ ಇದ್ದೆ. ತಕ್ಷಣ ವಿರಾಟ್ ಭಾಯ್ ಈ ಬ್ಯಾಟ್ ತೆಗೆದುಕೊಳ್ಳಿ ಎಂದು ಹೇಳಿ ಅವರ ಬ್ಯಾಟ್ ನನಗೆ ಕೊಟ್ಟರು. ಆ ಬ್ಯಾಟ್ ವಿರಾಟ್ ಭಾಯ್ ಉಡುಗೊರೆಯಾಗಿ ನೀಡಿದ್ದಾರೆ. ನಾನು ಆ ಬ್ಯಾಟ್‌ನೊಂದಿಗೆ ಎಂದಿಗೂ ಕ್ರಿಕೆಟ್ ಆಡುವುದಿಲ್ಲ. ಪ್ರೀತಿಯ ಸಂಕೇತವಾಗಿ ನನ್ನ ಕೋಣೆಯಲ್ಲಿ ಭದ್ರವಾಗಿಟ್ಟುಕೊಳ್ಳುವೆ ಎಂದಿದ್ದರು.
ಇದೀಗ ಆಕಾಶ್ ಅದೇ ಬ್ಯಾಟ್ನಿಂದಲೇ ಗಗನಚುಂಬಿ ಸಿಕ್ಸರ್ ಸಿಡಿಸಿದ್ದಾರೆಂದು ವಿರಾಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಇದು ಸತ್ಯವೇ ಅಥವಾ ಇಲ್ಲವೇ ಎಂಬ ವಿಚಾರ ಆಕಾಶ್ ಅವರಿಂದಲೇ ತಿಳಿಯಬೇಕಾಗಿದೆ.
ಇದನ್ನೂ ಓದಿ:ಭಾರತ-ಬಾಂಗ್ಲಾ 2ನೇ ಟೆಸ್ಟ್: 300ನೇ ವಿಕೆಟ್ ಪಡೆದು ಸಂಭ್ರಮಿಸಿದ ರವೀಂದ್ರ ಜಡೇಜಾ! - Jadeja Test Cricket Record