ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ಶನಿವಾರ ನಡೆದ 5ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯ ನೋಡಲು ಸಾಕಷ್ಟು ಸೆಲೆಬ್ರಿಟಿಗಳು ಮತ್ತು ಗಣ್ಯರು ಆಗಮಿಸಿದ್ದರು. ಈ ಪೈಕಿ ಬಾಲಿವುಡ್ ನಟ ಅಮಿರ್ ಖಾನ್ ಕೂಡಾ ಒಬ್ಬರು.
ಈ ಪಂದ್ಯದ ಕುರಿತು ಅವರು ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. "ಟೀಮ್ ಇಂಡಿಯಾ ಮೈದಾನಕ್ಕೆ ಕಾಲಿಟ್ಟಾಗ ನನ್ನ ಮನದಲ್ಲಿ ಗೊತ್ತಿಲ್ಲದೆ ಖುಷಿ ಹುಟ್ಟಿಕೊಳ್ಳುತ್ತದೆ. ನಾನೂ ಕೂಡಾ ತಂಡದ ಸದಸ್ಯನೆಂದೇ ಪರಿಗಣಿಸುತ್ತೇನೆ. ಅದು ನನಗೆ ಹೆಮ್ಮೆ. ಆದರೆ ನನ್ನ ಜೀವಮಾನದಲ್ಲಿ ಮರೆಯಲಾರದ ದಿವೊಂದಿದೆ. ಅದು 2011ರ ವಿಶ್ವಕಪ್ ಫೈನಲ್. ಅದನ್ನೆಂದಿಗೂ ಮರೆಯಲಾರೆ. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದ ಆ ದಿನ ತುಂಬಾ ವಿಶೇಷವಾಗಿತ್ತು" ಎಂದರು.
ಬಳಿಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕುರಿತು ಮಾತನಾಡುತ್ತಾ, "ಸಚಿನ್ ಕ್ರಿಕೆಟ್‌ನಿಂದ ನಿವೃತ್ತರಾಗುವ ಮೊದಲು ಅವರ ಕೊನೆಯ ಪಂದ್ಯವನ್ನು ನಾನೂ ನೋಡಿದ್ದೆ. ಅವರ ಆಟ ಅದ್ಭುತ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರೆಂದಿಗೂ ನನ್ನ ನೆಚ್ಚಿನ ಕ್ರಿಕೆಟಿಗ" ಎಂದು ಹೇಳಿದರು.
ಅಮಿರ್ ಖಾನ್ ಅವರ ಈ ವೀಡಿಯೊವನ್ನು ಬಿಸಿಸಿಐ 'X'ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.