Rahul Dravid Birthday: ಭಾರತ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟರ್ ಮತ್ತು 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಇಂದು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರಯಾಣ ಪ್ರಾರಂಭಿಸಿದ ದ್ರಾವಿಡ್ ದೀರ್ಘಕಾಲದವರೆಗೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ ಮತ್ತು ಮುರಿದಿದ್ದಾರೆ. ಆದರೆ ಯಾವುದೇ ಕ್ರಿಕೆಟರ್ಗೆ ಮುರಿಯಲು ಸಾಧ್ಯವಾಗದ ಅಪರೂಪದ ದಾಖಲೆಗಳು ಇಂದಿಗೂ ದ್ರಾವಿಡ್ ಹೆಸರಲ್ಲಿವೆ. ಅವು ಯಾವವು ಎಂದು ಇದೀಗ ತಿಳಿದುಕೊಳ್ಳೋಣ.
ದ್ರಾವಿಟ್ ಕ್ರಿಕೆಟ್ ವೃತ್ತಿ ಜೀವನ:ದ್ರಾವಿಡ್ 1996ರ ಏಪ್ರಿಲ್ನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದೊಂದಿಗೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟರ್ ವೃತ್ತಿಜೀವನ ಪ್ರಾರಂಭಿಸಿದರು. ಇದಾದ ಬಳಿಕ ಅದೇ ವರ್ಷ ಜೂನ್‌ನಲ್ಲಿ ದ್ರಾವಿಡ್‌ಗೆ ಟೆಸ್ಟ್ ಕ್ರಿಕೆಟ್‌ಗೂ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ದ್ರಾವಿಡ್ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 164 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ 286 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 52.31 ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 36 ಶತಕ ಮತ್ತು 63 ಅರ್ಧಶತಕಗಳನ್ನು ಹೊಂದಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 5 ದ್ವಿಶತಕಗಳನ್ನು ಸಹ ಗಳಿಸಿದ್ದಾರೆ.
ಏಕದಿನದಲ್ಲಿ ದಾಖಲೆ:ದ್ರಾವಿಡ್ ಅವರ ಏಕದಿನ ವೃತ್ತಿಜೀವನದ ಬಗ್ಗೆ ನೋಡಿದರೆ, ಅವರು 344 ಪಂದ್ಯಗಳನ್ನು ಆಡಿ, 318 ಇನ್ನಿಂಗ್ಸ್‌ಗಳಲ್ಲಿ 39.17 ಸರಾಸರಿಯಲ್ಲಿ 10,889 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 12 ಶತಕ ಮತ್ತು 83 ಅರ್ಧಶತಕಗಳನ್ನು ಹೊಂದಿದ್ದಾರೆ. ಇದಲ್ಲದೇ, ಅವರು ಭಾರತಕ್ಕಾಗಿ ಒಂದು ಟಿ 20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು ಇದರಲ್ಲಿ 31 ರನ್ ಗಳಿಸಿದ್ದಾರೆ.
10 ದೇಶಗಳಲ್ಲಿ ಶತಕ:ರಾಹುಲ್ ದ್ರಾವಿಡ್ ಕ್ರಿಕೆಟ್ ಇತಿಹಾಸದಲ್ಲಿ ಯಾರಿಂದಲೂ ಮಾಡಲು ಸಾಧ್ಯವಾಗದ ದಾಖಲೆಯೊಂದನ್ನು ಹೊಂದಿದ್ದಾರೆ. 10 ದೇಶಗಳಲ್ಲಿ ಶತಕಗಳನ್ನು ಗಳಿಸಿದ ವಿಶ್ವದ ಏಕೈಕ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ, ಜಿಂಬಾಬ್ವೆ ದೇಶಗಳು ಈ ಪಟ್ಟಿಯಲ್ಲಿ ಸೇರಿವೆ.
ಇದಷ್ಟೇ ಅಲ್ಲದೇ31,258 ಎಸೆತಗಳನ್ನು ಎದುರಿಸಿದ ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್ ನಂತರ ರಾಹುಲ್ ದ್ರಾವಿಡ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಫೀಲ್ಡರ್‌ನಿಂದ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ದಾಖಲೆಯು ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದೆ, ಒಟ್ಟು 210 ಕ್ಯಾಚ್‌ಗಳನ್ನು ಅವರು ಪಡೆದಿದ್ದಾರೆ.
ಇವರ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 2006 ರಲ್ಲಿ, ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 123 ರನ್‌ಗಳಿಂದ ಸೋಲಿಸಿತ್ತು. ಕಪಿಲ್ ದೇವ್ ನಂತರ, ರಾಹುಲ್ ದ್ರಾವಿಡ್ ಎರಡನೇ ಭಾರತೀಯ ನಾಯಕರಾಗಿದ್ದರು, ಅವರ ನಾಯಕತ್ವದಲ್ಲಿ ಭಾರತ ತಂಡವು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನೂ ಗೆದ್ದಿತು.
ಕ್ರಿಕೆಟ್ಗೆ ವಿದಾಯ ಹೇಳಿದ ನಂತರ, ದ್ರಾವಿಡ್ ಕೋಚಿಂಗ್ ವೃತ್ತಿಜೀವನಕ್ಕೆ ಕಾಲಿಟ್ಟರು. ನಂತರ ಭಾರತೀಯ U-19 ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಯಿತು. ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ 2018 ರಲ್ಲಿ U-19 ತಂಡ ವಿಶ್ವಕಪ್ ಗೆದ್ದಿತು. ಇದಾದ ನಂತರ ದ್ರಾವಿಡ್ ಅವರನ್ನು ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ನೇಮಿಸಲಾಯ್ತು. ಇವರ ಮಾರ್ಗದರ್ಶನದಲ್ಲಿ 2024ರಲ್ಲಿ ಭಾರತ 2ನೇ ಟಿ20 ವಿಶ್ವಕಪ್ ಗೆದ್ದುಕೊಂಡಿತು.
ಇದನ್ನೂ ಓದಿ:20 ವರ್ಷಗಳ ವನವಾಸ ಅಂತ್ಯ: ಎಲ್ಲಾ ಅಸ್ತ್ರಗಳನ್ನು ತ್ಯಜಿಸಿದ ಗಾಂಡೀವಧಾರಿ ಅರ್ಜುನನಂತೆ ಕಂಡ ವೀರೇಂದ್ರ ಸೆಹ್ವಾಗ್