ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಮತ್ತು ಟಿ20 ಸ್ಪೆಷಲಿಸ್ಟ್ ರಿಂಕು ಸಿಂಗ್ ಶೀಘ್ರದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಜೊತೆಗೆ ಸಪ್ತಪದಿ ತುಳಿಯಲು ತೀರ್ಮಾನಿಸಿದ್ದಾರೆ. ಕಳೆದ ತಿಂಗಳು ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಗುಟ್ಟಾಗಿ ನಿಶ್ಷಿತಾರ್ಥ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು.
ಆ ಬಳಿಕ ಈ ವಿಷಯ ಎಲ್ಲೆಡೆ ಹಬ್ಬಿದೆ. ಇದರ ಬೆನ್ನಲ್ಲೆ, ಪ್ರಿಯಾ ಸರೋಜ್ ತಂದೆ ಮತ್ತು ಶಾಸಕ ತುಫಾನಿ ಸರೋಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕೇವಲ ಮದುವೆ ಮಾತುಕತೆ ಮಾತ್ರ ನಡೆದಿದೆ ಎಂದಿದ್ದರು. ಇದಾದ ಬಳಿಕ ಇಬ್ಬರ ಮದುವೆ ವಿಷಯವಾಗಿ ತುಫಾನಿ ಸರೋಜ್ ಸ್ಪಷ್ಟನೆ ನೀಡಿದ್ದಾರೆ.
ಮದುವೆ ವಿಚಾರವಾಗಿ ರಿಂಕು ಸಿಂಗ್ ಅವರ ತಂದೆಯೊಂದಿಗೆ ಮಾತನಾಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿವೆ ಎಂದೂ ಹೇಳಿದ್ದಾರೆ. ಶೀಘ್ರದಲ್ಲೇ ಲಕ್ನೋದಲ್ಲಿ ಮದುವೆ ಮಾಡಿಕೊಳ್ಳಲಿದ್ದಾರೆ. ಪ್ರಿಯಾ ಮತ್ತು ರಿಂಕು ಸಿಂಗ್ ನಡುವಿನ ಮದುವೆ ವಿಚಾರ ಕಳೆದ ಒಂದು ವರ್ಷದಿಂದ ನಡೆಯುತ್ತಿತ್ತು. ಇಬ್ಬರ ಒಪ್ಪಿಗೆಯ ಬಳಿಕ ಇದೀಗ ಮದುವೆಯನ್ನು ಅಂತಿಮಗೊಳಿಸಲಾಗಿದೆ. ಶೀಘ್ರದಲ್ಲೆ ಮದುವೆ ದಿನಾಂಕ ಫಿಕ್ಸ್ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.