ದುಬೈ: 'ಇನ್ನು ಕೆಲವು ವರ್ಷಗಳ ಕಾಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಆಸೆ ಇದೆ' ಎಂದು ಹೇಳುವ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, 2024ರ ಟಿ20 ವಿಶ್ವಕಪ್ ಬಳಿಕ ಚುಟುಕು ಸ್ವರೂಪದ ಪಂದ್ಯಕ್ಕೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಗೆ ತೆರೆ ಎಳೆದಿದ್ದಾರೆ. ಅವರು ಇತ್ತೀಚೆಗೆ ದುಬೈನ ಸಂದರ್ಶನವೊಂದರಲ್ಲಿ ಭಾಗವಹಿಸಿ ಈ ಬಗ್ಗೆ ಪ್ರಸ್ತಾಪಿಸಿದರು.
'ತಮ್ಮ ಕ್ರಿಕೆಟ್ ಜೀವನ ಆರಂಭವಾಗಿ 17 ವರ್ಷಗಳು ಕಳೆದವು. ಈ ಪ್ರಯಾಣ ಅದ್ಭುತವಾಗಿ ಸಾಗುತ್ತಿದೆ. ಇನ್ನೂ ಕೆಲವು ವರ್ಷಗಳ ಕಾಲ ಆಟವಾಡಬೇಕಿದೆ. ಮುಂಬರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ನನ್ನ ಸಾಮರ್ಥ್ಯ ಸಾಬೀತುಪಡಿಸುವ ವಿಶ್ವಾಸ ಕೂಡ ನನಗಿದೆ’ ಎಂದು ಹೇಳುವ ಮೂಲಕ ಹರಿದಾಡುತ್ತಿರುವ ನಿವೃತ್ತಿ ವದಂತಿಯನ್ನು ತಳ್ಳಿ ಹಾಕಿದರು.
ನಾಯಕತ್ವದ ಬಗ್ಗೆಯೂ ಮಾತನಾಡಿರುವ ಅವರು, 'ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ನಾಯಕನಾಗುವ ಅವಕಾಶ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಆದರೆ, ಒಲಿದು ಬಂದಿದೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಅದಕ್ಕೇ ನನಗೆ ಈ ಗೌರವ ಸಿಕ್ಕಿದೆ. ನನ್ನ ನಾಯಕತ್ವದಲ್ಲಿ ಎಷ್ಟು ಸಾಧ್ಯವೋ ಅಷ್ಟು ತಂಡವನ್ನು ಸುಭದ್ರ ದಿಕ್ಕಿನಲ್ಲಿ ಮುನ್ನಡೆಸಲು ಬಯಸುವೆ. ವೈಯಕ್ತಿಕ ದಾಖಲೆ, ಹೆಸರು, ಖ್ಯಾತಿಯ ಹೊರತು ತಂಡದ ಎಲ್ಲ ಆಟಗಾರರು ಒಗ್ಗಟ್ಟಾಗಿ ಆಡಿದರೆ ಮಾತ್ರ ಟ್ರೋಫಿ ಗೆಲ್ಲಲು ಸಾಧ್ಯ' ಎಂದು ರೋಹಿತ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಡೆಲ್ ಸ್ಟೇನ್ ಅವರ ಬಗ್ಗೆಯೂ ಪ್ರಸ್ತಾಪ ಮಾಡಿರುವ ರೋಹಿತ್, 'ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ, ಕ್ರೀಸ್‌ಗೆ ಇಳಿಯುವ ಮೊದಲು ಅವರ ಬೌಲಿಂಗ್ ವಿಡಿಯೋಗಳನ್ನು 100 ಬಾರಿ ನೋಡುತ್ತಿದ್ದೆ. ಸ್ಟೇನ್ ಅವರ ಬೌಲಿಂಗ್ ಎದುರಿಸಲು ಇಷ್ಟ' ಎಂದು ರೋಹಿತ್ ಹೇಳಿದ್ದಾರೆ.
ಇದನ್ನೂ ಓದಿ:ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕಿಸ್ತಾನದ ಬಾಬರ್ ಅಜಂ: ಏನದು? - Babar Azam