ನ್ಯೂಯಾರ್ಕ್:ಟಿ20 ವಿಶ್ವಕಪ್ ಕದನಕ್ಕೆ ಸಜ್ಜುಗೊಂಡಿರುವ ಭಾರತ ತಂಡ ಇಂದು (ಬುಧವಾರ) ಐರ್ಲೆಂಡ್ ವಿರುದ್ಧ ಬಹು ನಿರೀಕ್ಷಿತ ಪಂದ್ಯದಲ್ಲಿ ಅಭಿಯಾನ ಆರಂಭಿಸಲಿದೆ. ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತದ ಮೊದಲ ಗ್ರೂಪ್ ಹಂತದ ಹಣಾಹಣಿ ನಡೆಯಲಿದೆ.
ನಾಯಕ ರೋಹಿತ್ ಶರ್ಮಾ ಅನುಭವಿಗಳು ಮತ್ತು ಭರವಸೆಯ ಯುವ ಪ್ರತಿಭೆಗಳಿಂದ ಕೂಡಿರುವ ಮಿಶ್ರ ತಂಡವನ್ನು ನಿರ್ಣಾಯಕ ಆರಂಭಿಕ ಆಟಗಾರನಾಗಿ ಮುನ್ನಡೆಸಲಿದ್ದಾರೆ. ಐತಿಹಾಸಿಕವಾಗಿ ಕೆಲ ಅಚ್ಚರಿಯ ಫಲಿತಾಂಶ ನೀಡಿರುವ ಎದುರಾಳಿ ಎಂದೇ ಪರಿಗಣಿಸಲಾದ ಐರ್ಲೆಂಡ್ ವಿರುದ್ಧ ಭಾರತ ಭರ್ಜರಿಯಾಗಿ ಗೆದ್ದು ಮುಂಬರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಿಕೊಳ್ಳುವ ಗುರಿ ಹೊಂದಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಭಾರತವು ಸಾಮರ್ಥ್ಯ ಸಾಬೀತುಪಡಿಸಲು ಈ ಟೂರ್ನಿ ಮಹತ್ವದ್ದಾಗಿದೆ. ಗೆಲುವಿನೊಂದಿಗೆ ಟಿ20 ವಿಶ್ವಕಪ್ನಲ್ಲಿ ಶುಭಾರಂಭ ಮಾಡಲು ರೋಹಿತ್ ಪಡೆ ಸಜ್ಜಾಗಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದು ಕೊನೆಯ ಟಿ20 ವಿಶ್ವಕಪ್ ಎಂದೇ ಹೇಳಲಾಗುತ್ತಿದೆ. ಕೊಹ್ಲಿ, 9000 ಟಿ20 ರನ್ ಬಾರಿಸಿದ್ದು, ರೋಹಿತ್ ಇತ್ತೀಚಿನ ಫಾರ್ಮ್‌ನಲ್ಲಿ ಕುಸಿತ ಕಂಡರೂ ಟಾಪ್ ಆರ್ಡರ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇತ್ತ ಐರ್ಲೆಂಡ್ ಭಾರತದಂತಹ ಉನ್ನತ ತಂಡದ ಎದುರು ದುರ್ಬಲವಾಗಿ ಕಂಡರೂ ಸಹ ಕೆಲವೊಮ್ಮೆ ಅಂದಾಜಿಸಲಾಗದ ಆಘಾತ ನೀಡಿದೆ. ಸ್ಫೋಟಕ ಬ್ಯಾಟರ್ ಪೌಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ ಜೊತೆಗೆ ಇನ್ನೂ ಹಲವರು ತಂಡಕ್ಕೆ ಬ್ಯಾಟಿಂಗ್ ಬಲ ನೀಡಬಲ್ಲ ಆಟಗಾರರಿದ್ದಾರೆ.
ನೆದರ್ಲೆಂಡ್ಸ್ ವಿರುದ್ಧ ಕ್ಯಾಂಫರ್ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಿತ್ತು ಗಮನಾರ್ಹ ಸಾಧನೆ ಮಾಡಿದ್ದು, ಇದು ಐರ್ಲೆಂಡ್‌ನ ಬೌಲಿಂಗ್ ಶಕ್ತಿಗೆ ಸಾಕ್ಷಿಯಾಗಿದೆ. ಭಾರತ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಪುಷ್ಟಿ ನೀಡಿದೆ. ಕಳೆ ಕ್ರಮಾಂಕದಲ್ಲಿ ಉತ್ತಮ ಬ್ಯಾಟರ್ ಮತ್ತು ವಿಶ್ವಾಸಾರ್ಹ ನಾಲ್ಕನೇ ಬೌಲಿಂಗ್ ಆಯ್ಕೆಯಾಗಿ ಪಾಂಡ್ಯ ದ್ವಿಪಾತ್ರವು ಪ್ರಮುಖವಾಗಿದೆ. ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಪ್ರಭಾವಶಾಲಿ ಪ್ರದರ್ಶನ ತೋರಿದ್ದರು. ಜೊತೆಗೆ ವಿಶೇಷವಾಗಿ ರಿಷಭ್ ಪಂತ್ ಮತ್ತು ಶಿವಂ ದುಬೆ ಕೂಡ ಮಿಂಚಿದ್ದರು.
ಒಂದು ವರ್ಷದ ಅವಧಿಯ ಗಾಯದ ವಿರಾಮದಿಂದ ಹಿಂದಿರುಗಿದ ಪಂತ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆತ್ಮವಿಶ್ವಾಸದಿಂದ ಬ್ಯಾಟ್ ಮಾಡುವುದು ಅತ್ಯಗತ್ಯವಾಗಿದೆ. ಇತ್ತೀಚಿನ ಫಾರ್ಮ್ ಪರಿಗಣಿಸಿದರೆ, ಅವರು ಈ ಹಿಂದಿನ 11 ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಮತ್ತು ಒಂದು ಶತಕ ಬಾರಿಸಿದ್ದಾರೆ.