ಪ್ರತಿಷ್ಠಿತ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಭಾರತ ತಂಡ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದೆ. ಬಾರ್ಬಡೋಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ, ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಮಣಿಸಿತು. ಈ ಮೂಲಕ ಅಜೇಯವಾಗಿ ಕಪ್ ಗೆದ್ದ ವಿಶ್ವದ ಮೊದಲ ತಂಡವಾಯಿತು.
ಬ್ರಿಡ್ಜ್‌ಟೌನ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ವಿರಾಟ್ ಕೊಹ್ಲಿ (76) ಮತ್ತು ಅಕ್ಷರ್ ಪಟೇಲ್ (47) ಅವರ ಇನಿಂಗ್ಸ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು. ಇದಕ್ಕುತ್ತರವಾಗಿ ದ.ಆಫ್ರಿಕಾ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ಪಂದ್ಯ ಭಾರತದ ಕೈಜಾರಿದಂತೆ ತೋರಿತು. ಆದರೆ, ಜಸ್ಪ್ರೀತ್ ಬುಮ್ರಾ ಬೌಲಿಂಗ್ ಪಂದ್ಯದ ಗತಿ ಬದಲಿಸಿತು.
ದ.ಆಫ್ರಿಕಾ ಮಣಿಸಿದ ಭಾರತ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿತು. ಮೈದಾನದಲ್ಲಿ ವಿಜೇತ ಆಟಗಾರರು ನೃತ್ಯ ಮಾಡಿದರು. ಪರಸ್ಪರ ಅಪ್ಪಿಕೊಂಡು ಖುಷಿಪಟ್ಟರು. ಕೋಚ್ ರಾಹುಲ್ ದ್ರಾವಿಡ್ ಅವರನ್ನು ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಎತ್ತಿ ಸಂಭ್ರಮಿಸಿದರು. ಅವಿಸ್ಮರಣೀಯ ಗೆಲುವು ಆಟಗಾರರ ಕಣ್ಣಲ್ಲಿ ಆನಂದಭಾಷ್ಪ ತರಿಸಿತು. ಟಿ20 ವಿಶ್ವಕಪ್ 2024ರ ವಿಜೇತ ಟ್ರೋಫಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿಜೇತ ತಂಡಕ್ಕೆ ಹಸ್ತಾಂತರಿಸಿದರು.
ರೋಹಿತ್ ಶರ್ಮಾ ವಿಡಿಯೋ ವೈರಲ್: ರೋಹಿತ್ ಶರ್ಮಾರನ್ನು ಟ್ರೋಫಿ ಸ್ವೀಕರಿಸಲು ವೇದಿಕೆಗೆ ಆಹ್ವಾನಿಸಿದಾಗ, ಅವರ ಪ್ರವೇಶ ಅಭಿಮಾನಿಗಳ ಹೃದಯ ಗೆದ್ದಿತು. ವಿಶಿಷ್ಟ ಶೈಲಿಯಲ್ಲಿ ಹೆಜ್ಜೆ ಹಾಕುತ್ತಾ ಬಂದ ಅವರು, ಜಯ್ ಶಾರಿಂದ ಟ್ರೋಫಿ ಪಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ ರೋಹಿತ್ - ಕೊಹ್ಲಿ! - Kohli Rohit retire from T20I