ಹೈದರಾಬಾದ್:ಭಾರತ ತಂಡ ಟಿ-20 ವಿಶ್ವಕಪ್ ಗೆದ್ದಿದ್ದು, ಪಾಕಿಸ್ತಾನದ ಹೊಟ್ಟೆಗೆ ಬೆಂಕಿ ಬೀಳುವಂತೆ ಮಾಡಿದೆ. ಅಲ್ಲಿನ ಮಾಜಿ ಕ್ರಿಕೆಟಿಗರು ಒಂದಲ್ಲಾ ಒಂದು ರೀತಿಯಲ್ಲಿ ಟೀಮ್ ಇಂಡಿಯಾ ಆಟಗಾರರನ್ನು ಟೀಕಿಸುತ್ತಲೇ ಇದ್ದಾರೆ. ತಂಡವು ಮೋಸದಿಂದ ವಿಶ್ವ ಟೂರ್ನಿ ಗೆದ್ದಿದೆ ಎಂದು ಆರೋಪಿಸುತ್ತಿದ್ದಾರೆ.
ಈಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪಾಕ್ನ ಮಾಜಿ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್, ಭಾರತ ತಂಡ ವಿಶ್ವಕಪ್ನಲ್ಲಿ ಮೋಸದ ಆಟವಾಡಿವೆ. ವೇಗಿ ಅರ್ಷದೀಪ್ ಸಿಂಗ್ ಆಸ್ಟ್ರೇಲಿಯಾ ವಿರುದ್ಧ ಹಾಕಿದ ಬೌಲಿಂಗ್ ಅನುಮಾನಿಸಿದ್ದಾರೆ. ಯುವ ಬೌಲರ್ ನಂಬಲಸಾಧ್ಯ ಸ್ವಿಂಗ್ಗಳನ್ನು ಎಸೆದಿದ್ದಾರೆ. ಅದಕ್ಕಾಗಿ 'ವಿಶೇಷ ಚೆಂಡು' ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂದರೆ, ಟೀಮ್ ಇಂಡಿಯಾ ಬಾಲ್ ಟ್ಯಾಂಪರಿಂಗ್ ಮಾಡಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗನ ಆರೋಪವಾಗಿದೆ. ಇದನ್ನು ಭಾರತದ ಸ್ಟಾರ್ ವೇಗಿ ಮೊಹಮದ್ ಶಮಿ ಜಾಡಿಸಿದ್ದಾರೆ. ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶಮಿ, "ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಕಾರ್ಟೂನ್ ರೀತಿ ತಮಾಷೆ ಮಾಡುವುದನ್ನು ಬಿಡಬೇಕು" ಎಂದು ವ್ಯಂಗ್ಯವಾಡಿದ್ದಾರೆ.
ತಮಾಷೆ ಹೇಳಿಕೆ ಬಿಡಿ:ಕ್ರಿಕೆಟ್ನಲ್ಲಿ ಹಲವು ವರ್ಷಗಳು ಕಳೆದು ನಿವೃತ್ತಿಯಾದ ಮಾಜಿ ಆಟಗಾರರು, ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇದನ್ನು ಅವರಿಂದ ನಾನು ನಿರೀಕ್ಷೆ ಮಾಡುವುದಿಲ್ಲ. ಅವರದ್ದೇ ತಂಡದ ಸ್ಟಾರ್ ವೇಗಿಯಾಗಿದ್ದ ವಾಸಿಂ ಅಕ್ರಮ್ ಕೂಡ ಇಂಥದ್ದೇ ಬೌಲಿಂಗ್ ಮಾಡಿ ಸೈ ಎನಿಸಿಕೊಂಡಿದ್ದರು. ಆಗ ನೀವು ಮಾಡಿದ್ದು, ಬಾಲ್ ಟ್ಯಾಂಪರಿಂಗೇ ಎಂದು ಪ್ರಶ್ನಿಸಿದ್ದಾರೆ. ಚೆಂಡಿನಲ್ಲಿ ಯಾವುದೇ ಸಾಧನ ಅಳವಡಿಸಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಇಂತಹ ಕಾರ್ಟೂನ್ ಹೇಳಿಕೆ ನಿಲ್ಲಿಸಿ ಎಂದು ತಿರುಗೇಟು ನೀಡಿದ್ದಾರೆ.