ನವದೆಹಲಿ:ಜೂನ್ 2 ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್‌ಗೆ ಇನ್ನು 31 ದಿನಗಳು ಬಾಕಿ ಉಳಿದಿವೆ. ಎಲ್ಲ ಕ್ರಿಕೆಟ್ ಮಂಡಳಿಗಳು ತನ್ನ ತಂಡವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಬ್ಯುಸಿ ಆಗಿವೆ. ಈ ಮಧ್ಯೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ 2024ರ ಟಿ-20 ವಿಶ್ವಕಪ್‌ಗೆ 15 ಸದಸ್ಯರ ತಂಡವನ್ನು ಸೋಮವಾರ ಪ್ರಕಟಿಸಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ನಾಯಕರಾಗಿದ್ದ ಕೇನ್ ವಿಲಿಯಮ್ಸನ್ರನ್ನೇ ಇಲ್ಲಿ ಮುಂದುವರಿಸಲಾಗಿದೆ.
ಹಿರಿಯ ಆಟಗಾರ ವಿಲಿಯಮ್ಸನ್ಗೆ ಇದು 6ನೇ ಟಿ-20 ವಿಶ್ವಕಪ್ ಆಗಿದೆ. ಇದರಲ್ಲಿ ನಾಲ್ಕು ವಿಶ್ವಕಪ್‌ಗಳಲ್ಲಿ ನಾಯಕರಾಗಿ ನೇಮಕವಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಖ್ಯಾತಿಯ ಹಿರಿಯ ಬೌಲರ್ ಟಿಮ್ ಸೌಥಿಗೆ ಸ್ಥಾನ ನೀಡಲಾಗಿದೆ. ಇದು ಅವರ 7ನೇ ವರ್ಲ್ಡ್ ಕಪ್ ಆಗಿದೆ. ಜೊತೆಗೆ ಟ್ರೆಂಟ್ ಬೌಲ್ಟ್ಗೂ ಅವಕಾಶ ನೀಡಲಾಗಿದ್ದು, ಇದು ಅವರ ಐದನೇ ಟಿ20 ವಿಶ್ವಕಪ್ ಆಗಿದೆ. ಮ್ಯಾಟ್ ಹೆನ್ರಿ ಮತ್ತು ಆಲ್‌ರೌಂಡರ್ ರಚಿನ್ ರವೀಂದ್ರ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದ ಟಿ-20 ವಿಶ್ವಕಪ್ ಆಡದ ಆಟಗಾರರಾಗಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ತಂಡದ ಕೋಚ್ ಗ್ಯಾರಿ ಸ್ಟೀಡ್, ವಿಶ್ವಕಪ್‌ಗೆ ತಂಡವನ್ನು ರಚನೆ ಮಾಡುವುದು ಸವಾಲಿನ ಸಂಗತಿ. ಆಯ್ಕೆಯಾದ ಎಲ್ಲ ಆಟಗಾರರಿಗೆ ಅಭಿನಂದನೆ. ವಿಶ್ವ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸುವುದು ವಿಶೇಷವೇ ಸರಿ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿನ ಪಿಚ್ಗಳು ವಿಭಿನ್ನವಾಗಿವೆ. ಪರಿಸ್ಥಿತಿಗೆ ಹೊಂದಿಕೊಂಡು ವಿಶ್ವಕಪ್ ಗೆಲ್ಲುವ ಗುರಿ ನಮ್ಮದಾಗಬೇಕು ಎಂದರು.