ಕರ್ನಾಟಕ

karnataka

ಯುವಿ ಅಭಿಮಾನಿಗಳಿಗೆ ಗುಡ್​ ನ್ಯೂಸ್! ಶೀಘ್ರ ಸೆಟ್ಟೇರಲಿದೆ 'ಸಿಕ್ಸರ್‌' ಸಿಂಗ್ ಜೀವನಾಧರಿತ ಸಿನಿಮಾ - Yuvraj Singh Biopic

By ETV Bharat Sports Team

Published : Aug 20, 2024, 4:29 PM IST

ಟೀಂ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟರ್​ ಯುವರಾಜ್​ ಸಿಂಗ್​ ಜೀವನಧಾರಿತ ಸಿನಿಮಾ ಮಾಡುವುದಾಗಿ ಟೀ ಸೀರಿಸ್​ ಪ್ರೊಡಕ್ಷನ್​ ಹೌಸ್​ ಘೋಷಿಸಿದೆ.

ಯುವರಾಜ್​ ಸಿಂಗ್​
ಯುವರಾಜ್​ ಸಿಂಗ್​ (ANI)

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಆಟಗಾರ ಯುವರಾಜ್ ಸಿಂಗ್ ಜೀವನಾಧರಿತ ಸಿನಿಮಾ ಮಾಡಲು ಪ್ರತಿಷ್ಠಿತ ಪ್ರೊಡಕ್ಷನ್​ ಹೌಸ್​ ಸಿದ್ಧತೆ ನಡೆಸುತ್ತಿದೆ. ಜವಾನ್ ಮತ್ತು ಅನಿಮಲ್ ನಂತಹ ಹಿಟ್​ ಚಿತ್ರಗಳನ್ನು ನಿರ್ಮಿಸಿರುವ ಟೀ ಸೀರಿಸ್ ಪ್ರೊಡಕ್ಷನ್ ಹೌಸ್​ ಬ್ಯಾನರ್​ನಡಿ ಯುವರಾಜ್ ಸಿಂಗ್ ಬಯೋಪಿಕ್​ ಸೆಟ್ಟೇರಲಿದೆ.

ಟೀ ಸೀರೀಸ್ ನಿರ್ಮಾಣ ಸಂಸ್ಥೆಯ ಮಾಲೀಕ ಭೂಷಣ್ ಕುಮಾರ್ ಮತ್ತು 200 ನಾಟ್ ಔಟ್ ಪ್ರೊಡಕ್ಷನ್ಸ್‌ನ ರವಿ ಪಚ್ಚನಡ್ಕ ಚಿತ್ರ ನಿರ್ಮಿಸಲಿದ್ದಾರೆ ಎಂದು ವರದಿಯಾಗಿದೆ. 2017ರಲ್ಲಿ ಬಿಡುಗಡೆಯಾದ ಸಚಿನ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಸಚಿನ್: ಎ ಬಿಲಿಯನ್ ಡ್ರೀಮ್ಸ್ ಚಿತ್ರದಲ್ಲಿ ರವಿ ಪಚ್ಚನಡ್ಕ ಕೆಲಸ ಮಾಡಿರುವುದು ಗಮನಾರ್ಹ.

ಈ ಚಿತ್ರದಲ್ಲಿನ ಪಾತ್ರಗಳ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಬಯೋಪಿಕ್‌ನಲ್ಲಿ ಯುವರಾಜ್ ಸಿಂಗ್ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬುದರ ಬಗ್ಗೆಯೂ ಯಾವುದೇ ಘೋಷಣೆ ಮಾಡಿಲ್ಲ. ಆದರೆ, ತಮ್ಮ ಪಾತ್ರವನ್ನು ನಟ ಸಿದ್ಧಾಂತ್ ಚತುರ್ವೇದಿ ಮಾಡಬೇಕು ಎಂಬ ಆಸೆಯನ್ನು ಯುವರಾಜ್ ವ್ಯಕ್ತಪಡಿಸಿದ್ದಾರೆ. ಸಿದ್ಧಾಂತ್‌ ಅವರ ನೋಟ ಯುವರಾಜ್‌ ಅವರ ನೋಟಕ್ಕೆ ಹೋಲಿಕೆಯಾಗುತ್ತದೆ.

ಯುವರಾಜ್ ಸಿಂಗ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ, ಭವಿಷ್ಯದಲ್ಲಿ ತಮ್ಮ ಬಯೋಪಿಕ್ ಮಾಡಿದರೆ, ಆ ಪಾತ್ರದಲ್ಲಿ ಸಿದ್ಧಾಂತ್ ಚತುರ್ವೇದಿಯನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ್ದರು. ಈಗ ಯುವಿ ಪಾತ್ರದಲ್ಲಿ ಸಿದ್ಧಾಂತ್ ಚತುರ್ವೇದಿಗೆ ಅವಕಾಶ ಸಿಗುತ್ತಾ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕು. ಮತ್ತೊಂದೆಡೆ, ಸಿದ್ಧಾಂತ್ ಕ್ರಿಕೆಟ್ ಆಧರಿತ ವೆಬ್-ಸರಣಿ ಇನ್‌ಸೈಡ್ ಎಡ್ಜ್‌ನಲ್ಲಿ ಕ್ರಿಕೆಟಿಗನಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಹೀಗಿರುವಾಗ ಯುವರಾಜ್ ಸಿಂಗ್ ಪಾತ್ರಕ್ಕೆ ನಿರ್ದೇಶಕರು ಯಾವ ನಟನನ್ನು ಆಯ್ಕೆ ಮಾಡುತ್ತಾರೆ ಎಂಬುದು ಅಭಿಮಾನಿಗಳಲ್ಲಿರುವ ಕುತೂಹಲ.

ಚಿತ್ರದ ಬಗ್ಗೆ ಯುವರಾಜ್​ ಹೇಳಿದ್ದೇನು?:"ನನ್ನ ಜೀವನಾಧರಿತ ಕಥೆಯನ್ನು ಪ್ರಪಂಚಾದ್ಯಂತ ಇರುವ ನನ್ನ ಲಕ್ಷಾಂತರ ಅಭಿಮಾನಿಗಳಿಗೆ ತೋರಿಸಲು ಮುಂದಾಗಿರುವುದು ತುಂಬಾ ಹೆಮ್ಮೆಯ ವಿಷಯ. ಕ್ರಿಕೆಟ್ ನನ್ನ ನೆಚ್ಚಿನ ಕ್ರೀಡೆ. ನನ್ನ ಶಕ್ತಿಯ ಮೂಲವೂ ಆಗಿದೆ. ಹಾಗಾಗಿ ಈ ಚಿತ್ರವು ಇತರರಿಗೆ ತಮ್ಮ ಸವಾಲುಗಳನ್ನು ಮೆಟ್ಟಿನಿಂತು ಗೆಲುವು ಸಾಧಿಸಲು ಮತ್ತು ಅವರ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ.

ಯುವರಾಜ್​ ಸಿಂಗ್​ (IANS Photos)

ಚಿತ್ರದಲ್ಲಿ 2007ರ ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ ಯುವಿ ಇಂಗ್ಲೆಂಡ್​ ವಿರುದ್ಧ ಸಿಡಿಸಿದ 6 ಸಿಕ್ಸರ್​ಗಳು, 2011ರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಿ ದೇಶವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಕೊಡುಗೆ ನೀಡಿರುವುದು ಅವರ ಜೀವನದ ಏರಿಳಿತದ ಬಗ್ಗೆ ಹೆಣೆಯಲಾಗುತ್ತದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಒಂದು ಓವರ್​ನಲ್ಲಿ 6 ಸಿಕ್ಸರ್​, 39 ರನ್! 17 ವರ್ಷದ ವಿಶ್ವದಾಖಲೆ ಪುಡಿ - Samoan Batter Visser World Record

ABOUT THE AUTHOR

...view details