ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಮುಂಬರುವ ದುಲೀಪ್ ಟ್ರೋಫಿಗೆ ನಾಲ್ಕು ತಂಡಗಳನ್ನು ಇತ್ತೀಚೆಗೆ ಪ್ರಕಟಿಸಿದೆ. ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಹೆಸರು ಈ ತಂಡಗಳಲ್ಲಿಲ್ಲ. ದುಲೀಪ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡಲಿದ್ದಾರೆ ಎಂಬ ಊಹಾಪೋಹವಿತ್ತು.
ಆದರೆ ತಂಡಗಳ ಘೋಷಣೆಯಾದ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೆಸರು ಎಲ್ಲಿಯೂ ಇರಲಿಲ್ಲ. ಈ ಬಗ್ಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಿಡ್ ಡೇ ಎಂಬ ಇಂಗ್ಲಿಷ್ ಪತ್ರಿಕೆಗೆ ಬರೆದಿರುವ ಅಂಕಣದಲ್ಲಿ, ದುಲೀಪ್ ಟ್ರೋಫಿಗಾಗಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಆಯ್ಕೆಗಾರರು ನಿರ್ಲಕ್ಷಿಸಿದ್ದಾರೆ. ಆದ್ದರಿಂದ ಅವರು ಯಾವುದೇ ಅಭ್ಯಾಸವಿಲ್ಲದೆ ನೇರವಾಗಿ ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಹೋಗುತ್ತಾರೆ. ಯಾವುದೇ ಕ್ರೀಡೆಯ ಆಟಗಾರರು 30ರ ಆಸುಪಾಸಿಗೆ ತಲುಪಿದಾಗ, ಅವರ ಸ್ನಾಯುಗಳು ನಿಧಾನವಾಗಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಇಂತಹ ಸಮಯದಲ್ಲಿ ಫಾರ್ಮ್‌ನಲ್ಲಿ ಉಳಿಯಬೇಕದಾರೆ ದೇಶಿ ಪಂದ್ಯಗಳು ಏಕೈಕ ಮಾರ್ಗ ಎಂದು ಗವಾಸ್ಕರ್ ಒತ್ತಿ ಹೇಳಿದರು.
ರೋಹಿತ್ ಮತ್ತು ವಿರಾಟ್ ಕೊಹ್ಲಿ ಟಿ20ಯಿಂದ ನಿವೃತ್ತಿಯಾಗಿದ್ದು, ಈ ವರ್ಷ ಇನ್ನು ಏಕದಿನ ಪಂದ್ಯ ಇಲ್ಲದಿರುವುದರಿಂದ ಟೆಸ್ಟ್ ಪಂದ್ಯಗಳನ್ನಷ್ಟೇ ಆಡುವ ಅವಕಾಶ ಸಿಗಲಿದೆ. ಹಾಗಾಗಿ ಈ ಇಬ್ಬರು ಫಾರ್ಮ್‌ನಲ್ಲಿ ಉಳಿಯಲು ಇಂತಹ ಟೂರ್ನಿಗಳ ಸದುಪಯೋಗ ಪಡೆಯಬೇಕು. ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿರುವುದಕ್ಕೆ ಅರ್ಥವಿದೆ. ಏಕೆಂದರೆ ವೇಗದ ಬೌಲರ್ ಆಗಿ ನಿರಂತರ ಪಂದ್ಯಗಳನ್ನು ಆಡಿದ್ದಾರೆ, ಗಾಯದ ಸಮಸ್ಯೆಗೂ ತುತ್ತಾಗಿದ್ದಾರೆ. ಆದರೆ ಬ್ಯಾಟ್ಸ್‌ಮನ್‌ಗಳು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ಇಲ್ಲದಿರುವಾಗ ಮಧ್ಯದಲ್ಲಿ ದೇಶಿ ಟೂರ್ನಿಗಳಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಇದರಿಂದ ಫಾರ್ಮ್ ಕಾಯ್ದುಕೊಳ್ಳಬಹುದು ಎಂದಿದ್ದಾರೆ.
ಇದಕ್ಕೂ ಮುನ್ನ ಈ ಬಗ್ಗೆ ಮಾತನಾಡಿದ್ದ ಜಯ್ ಶಾ, ದುಲೀಪ್ ಟ್ರೋಫಿಯಲ್ಲಿ ವಿರಾಟ್ ಮತ್ತು ರೋಹಿತ್ ಅವರನ್ನು ಆಡಿಸುವ ಮೂಲಕ ಹೊರೆ ಹೆಚ್ಚಿಸುವುದು ಜಾಣತನವಲ್ಲ ಎಂದು ಜಯ್ ಶಾ ರಾಷ್ಟ್ರೀಯ ಆಂಗ್ಲ ಸುದ್ದಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇದು ಅವರಿಗೆ ಗಾಯದ ಅಪಾಯ ಉಂಟುಮಾಡುತ್ತದೆ ಮತ್ತು ದೇಶೀಯ ಕ್ರಿಕೆಟ್ ವೇಳೆ ಅವರು ಗಾಯಗೊಳ್ಳಲು ಬಯಸುವುದಿಲ್ಲ. ಏಕೆಂದರೆ ಭಾರತ ತಂಡ ಮುಂದೆ ಪ್ರಮುಖ ಪಂದ್ಯಗಳನ್ನು ಆಡಲಿದೆ ಎಂದು ತಿಳಿಸಿದ್ದಾರೆ.