ನವದೆಹಲಿ:ಭಾರತದ 19 ವರ್ಷದೊಳಗಿನವರ ದೇಶೀಯ ಕ್ರಿಕೆಟ್ ಟೂರ್ನಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ಬಿಹಾರದ ಯುವ ವೇಗದ ಬೌಲರ್ ಸುಮನ್ ಕುಮಾರ್, ಇನ್ನಿಂಗ್ಸ್‌ವೊಂದರಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆಯುವ ಮೂಲಕ ಹೊಸ ಇತಿಹಾಸ ಬರೆದರು. ಇದೇ ವೇಳೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಮತ್ತೊಂದು ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಪಾಟ್ನಾದ ಮೊಯಿನ್ ಉಲ್ ಹಕ್ ಸ್ಟೇಡಿಯಂನಲ್ಲಿಂದು ನಡೆದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು.
ರಾಜಸ್ಥಾನದ ಮೊದಲ ಇನಿಂಗ್ಸ್‌ನಲ್ಲಿ ಸುಮನ್ ಒಟ್ಟು 33.5 ಓವರ್‌ಗಳನ್ನು ಬೌಲ್ ಮಾಡಿದ್ದು, 53 ರನ್ ನೀಡಿ ಎಲ್ಲಾ 10 ವಿಕೆಟ್‌ಗಳನ್ನು ಉರುಳಿಸಿದರು. ಜೊತೆಗೆ ಇನ್ನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಪಡೆದ ಅವಧಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಕೀರ್ತಿಗೆ ಪಾತ್ರರಾದರು.
ರಾಜಸ್ಥಾನ ತಂಡದ ಬ್ಯಾಟರ್‌ಗಳಾದ ಪಾರ್ಥ್ ಯಾದವ್, ಮನಯ್ ಕಾರ್ತಿಕೇಯ, ತೋಶಿತ್, ಮೋಹಿತ್ ಭಗ್ತಾನಿ, ಅನಾಸ್, ಸಚಿನ್ ಶರ್ಮಾ, ಆಕಾಶ್ ಮುಂಡೆಲ್, ಜತಿನ್, ಅಭಾಸ್ ಶ್ರೀಮಾಲಿ, ಧ್ರುವ್ ಮತ್ತು ಗುಲಾಬ್ ಸಿಂಗ್ ಅವರನ್ನು ಸುಮನ್ ಔಟ್ ಮಾಡಿದರು.
ಸುಮನ್ ಅವರ ಮಾರಕ ಬೌಲಿಂಗ್ ದಾಳಿಗೆ ರಾಜಸ್ಥಾನ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 182 ರನ್‌ಗಳಿಗೆ ಆಲೌಟ್ ಆಯಿತು. ಬಿಹಾರ ಮೊದಲ ಇನ್ನಿಂಗ್ಸ್ನಲ್ಲಿ 467 ರನ್ ಗಳಿಸಿತ್ತು. ಸುಮನ್ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಅವರು 56 ಎಸೆತಗಳನ್ನು ಎದುರಿಸಿ ನಾಲ್ಕು ಬೌಂಡರಿಗಳ ನೆರವಿನಿಂದ 22 ರನ್ ಗಳಿಸಿದರು.
ಇಂಥ ದಾಖಲೆ ವರ್ಷದಲ್ಲಿದು 2ನೇ ಬಾರಿ: ಈ ವರ್ಷದ ದೇಶೀಯ ಕ್ರಿಕೆಟ್‌ನಲ್ಲಿ ಭಾರತದ ಆಟಗಾರನೊಬ್ಬ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, 2024-25ರ ರಣಜಿ ಟ್ರೋಫಿಯಲ್ಲಿ ಹರಿಯಾಣದ ಅಂಶುಲ್ ಕಾಂಬೋಜ ಕೇರಳ ವಿರುದ್ಧ ಇನ್ನಿಂಗ್ಸ್‌ವೊಂದರಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದರು.