ಕ್ರೀಡಾರಂಗದಲ್ಲಿ ದೇಶವನ್ನು ಪ್ರತಿನಿಧಿಸುವುದು ಅಸಾಮಾನ್ಯ ಗೌರವ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು, ಛಾಪು ಮೂಡಿಸಲು ಕಠಿಣ ಪರಿಶ್ರಮ ಮತ್ತು ಅದೃಷ್ಟವೂ ಅಗತ್ಯ. ಅದರಲ್ಲೂ ಎರಡು ತಲೆಮಾರಿನ ಕ್ರಿಕೆಟಿಗರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಸುಲಭದ ಮಾತಲ್ಲ. ಆದರೆ, ಭಾರತೀಯ ಕ್ರಿಕೆಟ್‌ನಲ್ಲಿ ತಂದೆ - ಮಗ ಇಬ್ಬರೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ಗಮನ ಸೆಳೆದ ನಿದರ್ಶನಗಳಿವೆ. ಅಂತಹವರ ಬಗ್ಗೆ ತಿಳಿಯೋಣ ಬನ್ನಿ.
ಪಟೌಡಿ ಪರಂಪರೆ:ನವಾಬ್ ಮೊಹಮ್ಮದ್ ಇಫ್ತಿಕರ್ ಅಲಿ ಖಾನ್ ಪಟೌಡಿ ಒಟ್ಟು 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರು ಎರಡು ದೇಶಗಳ ಪರ ನಾಯಕನಾಗಿ ಆಡಿರುವ ಅಪರೂಪದ ದಾಖಲೆ ಹೊಂದಿದ್ದಾರೆ. ಅಲಿ ಖಾನ್ ಮೊದಲ 3 ಟೆಸ್ಟ್‌ಗಳನ್ನು ಇಂಗ್ಲೆಂಡ್ ಮತ್ತು ಬಳಿಕದ 3 ಟೆಸ್ಟ್ ಪಂದ್ಯಗಳನ್ನು ಭಾರತದ ಪರ ಆಡಿದರು. ಪಟೌಡಿ 1932-34ರ ನಡುವೆ ಇಂಗ್ಲೆಂಡ್ ಪರ ಆಡಿದರೆ, ಆ ಬಳಿಕ ಮೂರು ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 1946ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು.
ಪಟೌಡಿ ಭಾರತ - ಇಂಗ್ಲೆಂಡ್ ಪರ ಆಡಿದ ಏಕೈಕ ಟೆಸ್ಟ್ ಕ್ರಿಕೆಟಿಗರಾದರು. ಇಫ್ತಿಕರ್ ಪಟೌಡಿ ಅವರ ಮಗ ಮನ್ಸೂರ್ ಅಲಿ ಖಾನ್ ಪಟೌಡಿ ಕೂಡ ತಮ್ಮ ತಂದೆಯ ಪರಂಪರೆಯನ್ನು ಮುಂದುವರೆಸಿದರು. ಅಲಿ ಖಾನ್ ಪಟೌಡಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ್ದರು. ಅವರು ಪಟೌಡಿ ಜೂನಿಯರ್ ನವಾಬ್ ಎಂದೇ ಖ್ಯಾತರಾಗಿದ್ದರು. 46 ಟೆಸ್ಟ್‌ಗಳಲ್ಲಿ ಅವರು 2,739 ರನ್ ಗಳಿಸಿದ್ದರು.
ಅಮರನಾಥ್ ಜೋಡಿ:ಲಾಲಾ ಅಮರನಾಥ್ ಟೀಂ ಇಂಡಿಯಾದ ಅಪ್ರತಿಮ ಆಟಗಾರರಲ್ಲಿ ಒಬ್ಬರು. ಲಾಲಾ ಅಮರನಾಥ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದವರು. ಲಾಲಾ ಅಮರನಾಥ್ 24 ಟೆಸ್ಟ್‌ಗಳಲ್ಲಿ ಟೀಮ್ ಇಂಡಿಯಾದಲ್ಲಿ ಆಡಿದ್ದು, 878 ರನ್ ಗಳಿಸಿದ್ದಾರೆ. ಲಾಲಾ ಅಮರನಾಥ್ ಅವರ ಪುತ್ರ ಮೊಹಿಂದರ್ ಅಮರನಾಥ್ ಕೂಡ ಭಾರತವನ್ನು ಪ್ರತಿನಿಧಿಸಿದ್ದರು. ಮೊಹಿಂದರ್ ಅಮರನಾಥ್ ಅವರು 1983ರ ಏಕದಿನ ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯರಾಗಿದ್ದರು. ಮೊಹಿಂದರ್ ಅಮರನಾಥ್ ಅವರು ಭಾರತದ ಪರ 69 ಟೆಸ್ಟ್ ಮತ್ತು 85 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ವಿನೂ ಮಂಕಡ್ - ಅಶೋಕ್ ಮಂಕಡ್:ವಿನೂ ಮಂಕಡ್ 44 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 162 ವಿಕೆಟ್ ಪಡೆದರು. ವಿನೂ ಮಂಕಡ್ ಅವರ ಪುತ್ರ ಅಶೋಕ್ ಮಂಕಡ್ ಕೂಡ ಭಾರತದ ಪರ 22 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯವನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 991 ರನ್ ಗಳಿಸಿದರೆ, ಏಕದಿನದಲ್ಲಿ 44 ರನ್ ಬಾರಿಸಿದ್ದರು.