ನವದೆಹಲಿ:ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ರೋಡ್ ಶೋ ಮೂಲಕ ಚಾಂಪಿಯನ್ಸ್ ಟ್ರೋಫಿ ಪ್ರವಾಸ ಮಾಡದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧ ಹೇರಿದೆ.
ಪಾಕಿಸ್ತಾನದಲ್ಲಿ ಮುಂದಿನ ವರ್ಷ 2025 ರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಐಸಿಸಿ ಚಾಂಪಿಯನ್‌ಶಿಪ್ ಟ್ರೋಫಿ ಪಂದ್ಯಗಳು ನಡೆಯಲಿವೆ. ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದರ ಬಗ್ಗೆ ಅನಿಶ್ಚಿತತೆ ಇದೆ. ಇದರ ನಡುವೆ ಐಸಿಸಿ ನಿರ್ಧಾರ ಮಹತ್ವ ಪಡೆದಿದೆ.
ಗುರುವಾರ, ಪಿಸಿಬಿ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿ, "ಸಿದ್ಧರಾಗಿ, ಪಾಕಿಸ್ತಾನ! ICC ಚಾಂಪಿಯನ್ಸ್ ಟ್ರೋಫಿ 2025 ಟ್ರೋಫಿ ಪ್ರವಾಸವು ಇಸ್ಲಾಮಾಬಾದ್‌ನಲ್ಲಿ ನವೆಂಬರ್ 16 ರಂದು ಪ್ರಾರಂಭವಾಗುತ್ತದೆ. ಸ್ಕರ್ಡು, ಮುರ್ರೆ, ಹುಂಜಾ ಮತ್ತು ಮುಜಫರಾಬಾದ್‌ನಂತಹ ರಮಣೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ. 2017 ರಲ್ಲಿ ಸರ್ಫರಾಜ್ ಅಹ್ಮದ್ ಎತ್ತಿ ಹಿಡಿದಿದ್ದ ಟ್ರೋಫಿಯ ದೃಶ್ಯ ನೋಡಿ" ಎಂದಿದೆ.
ಸ್ಕರ್ಡು, ಮುರ್ರೆ, ಹುಂಜಾ ಮತ್ತು ಮುಜಫರಾಬಾದ್ ವಿವಾದಿತ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ ಸ್ಥಳಗಳಾಗಿವೆ. ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತದೆಯೇ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಂತಹ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಲಿದೆಯೇ ಎಂಬ ಬಗ್ಗೆ ಐಸಿಸಿ, ಬಿಸಿಸಿಐ ಮತ್ತು ಪಿಸಿಬಿ ನಡುವಿನ ಮಾತುಕತೆ ನಡೆಯುತ್ತಿರುವ ವೇಳೆ ಪಿಒಕೆಯಲ್ಲಿನ ಸ್ಥಳಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸುವ ಪಿಸಿಬಿಯ ಪ್ರಕಟಣೆ ವಿವಾದಕ್ಕಿಡಾಗಿದೆ. ಈಗ, ಪಿಸಿಬಿ ಪಿಒಕೆಯಲ್ಲಿ ಟ್ರೋಫಿ ರೋಡ್ ಶೋ ನಡೆಸದಂತೆ ಐಸಿಸಿ ನಿಷೇಧ ಹೇರಿರುವುದು ವಿಶ್ವ ಕ್ರಿಕೆಟ್ನಲ್ಲಿ ಭಾರತದ ಹಿಡಿತ ಎಷ್ಟರ ಮಟ್ಟಿಗೆ ಇದೆ ಎಂದು ಗೊತ್ತಾಗುತ್ತದೆ.