ಚೆನ್ನೈ (ತಮಿಳುನಾಡು):ಮೊದಲ ಪ್ರಯತ್ನದಲ್ಲಿ ಸೋಲು ಅನುಭವಿಸಿದರೂ ಸಿಕ್ಕ ಇನ್ನೊಂದು ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸನ್ರೈಸರ್ಸ್ ಹೈದರಾಬಾದ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಫೈನಲ್ ಪ್ರವೇಶಿಸಿತು. ಎರಡನೇ ಕ್ವಾಲಿಫೈಯರ್ನಲ್ಲಿ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು 36 ರನ್ಗಳಿಂದ ಸೋಲಿಸಿ, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಿತು.
ಇಲ್ಲಿನ ಪಿ.ಚಿದಂಬರಂ(ಚೆಪಾಕ್) ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಪಡೆ 9 ವಿಕೆಟ್ಗೆ 175 ರನ್ಗಳ ಸಾಧಾರಣ ಮೊತ್ತ ಗಳಿಸಿತು. ಈಗಿನ ಟಿ20 ಕ್ರಿಕೆಟ್ನಲ್ಲಿ 200 ರನ್ ಕೂಡ ಸುಲಭದ ತುತ್ತಾಗಿರುವಾಗ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 139 ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡು ಟೂರ್ನಿಯಿಂದ ಹೊರಬಿದ್ದಿತು.
ಚೆನ್ನೈನ ಸ್ಪಿನ್ ಪಿಚ್ನಲ್ಲಿ ಹೈದರಾಬಾದ್ನ ಶಹಬಾಜ್ ಅಹ್ಮದ್, ಅಭಿಷೇಕ್ ಶರ್ಮಾ ಜಾದೂ ಮಾಡುವ ಮೂಲಕ ರಾಯಲ್ಸ್ ಬ್ಯಾಟರ್ಗಳು ರನ್ ಗಳಿಸದಂತೆ ತಡೆಯುವುದಲ್ಲದೇ ವಿಕೆಟ್ ಉದುರಿಸುತ್ತಾ ಸಾಗಿದರು. ಇದರಿಂದ ಸಂಜು ಸ್ಯಾಮ್ಸನ್ ಪಡೆ ಯಾವುದೇ ಹಂತದಲ್ಲಿ ಪ್ರತಿರೋಧ ಒಡ್ಡಲು ಸಾಧ್ಯವಾಗಲಿಲ್ಲ.
ಟೂರ್ನಿಯ ಆರಂಭದಲ್ಲಿ ಅಬ್ಬರಿಸಿದ್ದ ರಾಜಸ್ಥಾನ ಬಳಿಕ ಮಂಕಾಗಿತ್ತು. ಪ್ಲೇಆಫ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಎರಡನೇ ಕ್ವಾಲಿಫೈಯರ್ಗೆ ಬಂದಿತ್ತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರೂ, ಬ್ಯಾಟಿಂಗ್ನಲ್ಲಿ ಎಡವಿದರು. ಯಶಸ್ವಿ ಜೈಸ್ವಾಲ್ 42, ಧ್ರುವ್ ಜುರೆಲ್ 56 ಅರ್ಧಶತಕ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಕೂಡ ರನ್ ಗಳಿಸಲಿಲ್ಲ. ಟಾಮ್ ಕಾಡ್ಮೋರ್ 10, ನಾಯಕ ಸಂಜು ಸ್ಯಾಮ್ಸನ್ 10, ರಿಯಾನ್ ಪರಾಗ್ 6, ಶಿಮ್ರಾನ್ ಹೆಟ್ಮಾಯರ್ 4, ಪೊವೆಲ್ 6 ರನ್ಗೆ ವಿಕೆಟ್ ನೀಡಿದ್ದು ದುಬಾರಿಯಾಯಿತು.