ಹೈದರಾಬಾದ್:ಸತತ ಸೋಲಿನಿಂದ ಕಂಗೆಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಂಡದ ನಾಯಕನ ಬದಲಾವಣೆ ಮಾಡಿದೆ. ಕಳೆದ ಬಾರಿಯ ಆವೃತ್ತಿಯಲ್ಲಿ ತಂಡ ಮುನ್ನಡೆಸಿದ್ದ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್ ಬದಲಾಗಿ ಏಕದಿನ ವಿಶ್ವಕಪ್ ವಿಜೇತ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಹೈದರಾಬಾದ್ ತಂಡದ ನೇತೃತ್ವ ವಹಿಸಲಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಆಸೀಸ್ ವೇಗಿಯನ್ನು ಎಸ್ಆರ್ಎಚ್ 20.50 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದು ಟೂರ್ನಿಯ ಇತಿಹಾಸದಲ್ಲೇ ಎರಡನೇ ಅತ್ಯಧಿಕ ದುಬಾರಿ ಬೆಲೆಯಾಗಿದೆ.
ನಾಯಕತ್ವ ಬದಲಾವಣೆ ಬಗ್ಗೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಎಸ್ಆರ್ಎಚ್, 2023ರ ಋತುವಿನಲ್ಲಿ ತಂಡವನ್ನು ಮುನ್ನಡೆಸಿದ್ದ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್ ಬದಲಿಗೆ ಪ್ಯಾಟ್ ಕಮ್ಮಿನ್ಸ್ರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ. ಕಮ್ಮಿನ್ಸ್ ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ಪರ ಆಡಿದ್ದರು.
ಬೌಲಿಂಗ್ ಕೋಚ್ ಬದಲು:ಹರಾಜಿನಲ್ಲಿ ದುಬಾರಿ ಬೆಲೆಗೆ ಕಮ್ಮಿನ್ಸ್ರನ್ನು ಖರೀದಿಸಿದ ಬಳಿಕ ತಂಡದ ಆಡಳಿತ ಮಂಡಳಿಯು ನಾಯಕತ್ವದ ಹೊಣೆ ನೀಡಲಿದೆ ಎಂದು ಊಹಿಸಲಾಗಿತ್ತು. ಇನ್ನು ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಅವರು ಖಾಲಿಯಾದ ಬೌಲಿಂಗ್ ಕೋಚ್ ಹುದ್ದೆಗೆ ಜೇಮ್ಸ್ ಫ್ರಾಂಕ್ಲಿನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬೌಲಿಂಗ್ ಕೋಚ್ ಆಗಿದ್ದ ಡೇಲ್ ಸ್ಟೇಯ್ನ್ ವಿಶ್ರಾಂತಿ ಬಯಸಿದ ಕಾರಣ ಅವರ ಸ್ಥಾನ ಖಾಲಿಯಾಗಿತ್ತು.