ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್​ನಿಂದ ವಿನೇಶ್​ ಫೋಗಟ್​ ಅನರ್ಹ: ವಿಶ್ವ ಕುಸ್ತಿ ಒಕ್ಕೂಟಕ್ಕೆ ಭಾರತ ದೂರು, ಸಂಸತ್ತಿನಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ - Vinesh Phogat - VINESH PHOGAT

ಭಾರತದ ತಾರಾ ಕುಸ್ತಿಪಟು ವಿನೇಶ್​ ಫೋಗಟ್​ ಅವರನ್ನು ಒಲಿಂಪಿಕ್ಸ್​ನಿಂದ ಅನರ್ಹಗೊಳಿಸಿದ್ದು, ಭಾರತೀಯರಿಗೆ ತೀವ್ರ ಆಘಾತ​ ಉಂಟು ಮಾಡಿದೆ. ಈ ಬಗ್ಗೆ ವಿಶ್ವ ಕುಸ್ತಿ ಒಕ್ಕೂಟಕ್ಕೆ ಭಾರತ ದೂರು ನೀಡಿದೆ. ಇನ್ನೊಂದೆಡೆ, ಸಂಸತ್ತಿನಲ್ಲೂ ಇಂದು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು.

ಒಲಿಂಪಿಕ್ಸ್​ನಿಂದ ವಿನೇಶ್​ ಪೋಗಟ್​ ಅನರ್ಹ
ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಒಲಿಂಪಿಕ್ಸ್​ನಿಂದ ವಿನೇಶ್​ ಫೋಗಟ್​ ಅನರ್ಹ ಪ್ರಕರಣ (ETV Bharat)

By ETV Bharat Sports Team

Published : Aug 7, 2024, 7:06 PM IST

ನವದೆಹಲಿ:ಭಾರತ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದರ ವಿರುದ್ಧ ವಿಶ್ವ ಕುಸ್ತಿ ಒಕ್ಕೂಟಕ್ಕೆ ದೂರು ನೀಡಲಾಗಿದೆ. ಈ ಬಗ್ಗೆ ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲೋಕಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, 50 ಕೆ.ಜಿ. ವಿಭಾಗದಲ್ಲಿ ಚಿನ್ನದ ನಿರೀಕ್ಷೆ ಮೂಡಿಸಿದ್ದ ವಿನೇಶ್​ ಪೋಗಟ್​ ಅವರನ್ನು ಒಲಿಂಪಿಕ್ಸ್​ನಿಂದ ಹೊರಹಾಕಿದ್ದು ನೋವು ತಂದಿದೆ. ವಿನೇಶ್​ ಪರವಾಗಿ ಭಾರತೀಯ ಒಲಿಂಪಿಕ್​​ ಸಂಸ್ಥೆ ಹೋರಾಟ ನಡೆಸುತ್ತಿದೆ. ವಿಶ್ವ ಕುಸ್ತಿ ಒಕ್ಕೂಟಕ್ಕೆ ವಿದ್ಯಮಾನದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ವಿನೇಶ್​ ಪೋಗಟ್​ ಅವರ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರೊಂದಿಗೆ ಮಾತನಾಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸದ್ಯ ವಿನೇಶ್​ ಅವರ ದೇಹ ತೂಕ 50 ಕೆ.ಜಿ 100 ಗ್ರಾಂ ಇದೆ. ಸ್ಪರ್ಧೆಗೆ ಅರ್ಹವಿರುವ ದೇಹ ತೂಕಕ್ಕಿಂತ ಇದು ತುಸು ಹೆಚ್ಚಿದೆ. ನಮ್ಮ ಕುಸ್ತಿಪಟುವನ್ನು ಅನರ್ಹಗೊಳಿಸಿದ್ದರ ವಿರುದ್ಧ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರತಿಭಟನೆ ವ್ಯಕ್ತಪಡಿಸಿದೆ ಎಂದರು.

ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಪ್ಯಾರಿಸ್​ನಲ್ಲಿದ್ದಾರೆ. ಘಟನೆಯ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಪ್ರಧಾನಿ ಸೂಚಿಸಿದ್ದಾರೆ. ನಮ್ಮೆಲ್ಲಾ ಕ್ರೀಡಾಪಟುಗಳು ಮತ್ತು ಅವರ ವೈಯಕ್ತಿಕ ಸಿಬ್ಬಂದಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿಪಕ್ಷಗಳಿಂದ ಪ್ರತಿಭಟನೆ:ಫೈನಲ್​ಗೂ ಮೊದಲು ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಕ್ರಮ ಖಂಡಿಸಿ ಪ್ರತಿಪಕ್ಷಗಳು ಸಂಸತ್ ದ್ವಾರದ ಬಳಿ ಪ್ರತಿಭಟನೆ ನಡೆಸಿದವು. ಎನ್‌ಸಿಪಿ ಸಂಸದ ಪ್ರಫುಲ್ ಪಟೇಲ್ ಮಾತನಾಡಿ, ವಿನೇಶ್ ಅವರನ್ನು ಅನರ್ಹಗೊಳಿಸಿರುವುದು ಆಘಾತ ತಂದಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೇರಿದಂತೆ ಎಲ್ಲಾ ಕ್ರೀಡಾ ಸಂಸ್ಥೆಗಳು ಈ ರೀತಿಯ ಮಾನದಂಡಗಳಿಂದ ವಿನಾಯಿತಿ ಹೊಂದಿರಬೇಕು. ಫೈನಲ್‌ಗೂ ಮೊದಲು ಕ್ರೀಡಾಪಟುವನ್ನು ಹೇಗೆ ಅನರ್ಹಗೊಳಿಸುತ್ತೀರಿ. ಇದು ಆಘಾತಕಾರಿ ಮತ್ತು ಅಚ್ಚರಿಯ ಸಂಗತಿ. ಭಾರತ ಸರ್ಕಾರ ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆ ಈ ಬಗ್ಗೆ ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದರು.

ವಿನೇಶ್​​​ ಅನರ್ಹತೆ ಏಕೆ?:ಮಹಿಳಾ ಕುಸ್ತಿಯ 50 ಕೆ.ಜಿ ವಿಭಾಗದಲ್ಲಿ ಭಾರತದ ವಿನೇಶ್​ ಫೋಗಟ್​ ಬುಧವಾರ ಫೈನಲ್​ ತಲುಪಿದ್ದರು. ಗುರುವಾರ ನಡೆಯಬೇಕಿದ್ದ ಚಿನ್ನದ ಪದಕ ಹೋರಾಟಕ್ಕೂ ಮೊದಲು ಅವರ ದೇಹ ತೂಕದಲ್ಲಿ ಏರಿಕೆ ಕಂಡುಬಂದಿದೆ. 100 ಗ್ರಾಂ ತೂಕ ಹೆಚ್ಚಾಗಿದ್ದ ಅವರನ್ನು ಒಲಿಂಪಿಕ್ಸ್​ನಿಂದಲೇ ಅನರ್ಹಗೊಳಿಸಲಾಗಿದ್ದು, ಭಾರತೀಯರಿಗೆ ಶಾಕ್​ ತಂದಿದೆ.

ಇದನ್ನೂ ಓದಿ:ಭಾರತಕ್ಕೆ ದೊಡ್ಡ ಆಘಾತ: ಚಿನ್ನದ ನಿರೀಕ್ಷೆಯಲ್ಲಿದ್ದ ​ವಿನೇಶ್​ ಫೋಗಟ್ ಪ್ಯಾರಿಸ್​ ಒಲಿಂಪಿಕ್ಸ್​ನಿಂದಲೇ ಅನರ್ಹ - Vinesh Phogat is disqualified

ABOUT THE AUTHOR

...view details