ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್ ಸೂಪರ್​-8: ಅಮೆರಿಕ ವಿರುದ್ಧ ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ - South Africa Beats USA

ಟಿ20 ವಿಶ್ವಕಪ್ ಟೂರ್ನಿಯ ಸೂಪರ್​-8 ಹಂತದ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಗೆದ್ದು ದಕ್ಷಿಣ ಆಫ್ರಿಕಾ ತಂಡ ಶುಭಾರಂಭ ಮಾಡಿದೆ.

south africa beats usa
ಅಮೆರಿಕ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ (Photo: IANS)

By PTI

Published : Jun 20, 2024, 9:48 AM IST

ಆಂಟಿಗುವಾ:ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್​-8 ಹಂತದ​ ಪಂದ್ಯದಲ್ಲಿ ಅಮೆರಿಕ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು 18 ರನ್​ಗಳ ಗೆಲುವು ಸಾಧಿಸಿದೆ.

ಟಾಸ್​​ ಗೆದ್ದ ಅಮೆರಿಕ​ ತಂಡ ಮೊದಲು ಹರಿಣಗಳನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಮೈದಾನಕ್ಕಿಳಿದ ದಕ್ಷಿಣ ಆಫ್ರಿಕಾಗೆ ಆರಂಭಿಕ ಆಟಗಾರ ಕ್ವಿಂಟನ್​ ಡಿ ಕಾಕ್ (74)​ ಭರ್ಜರಿ ಅರ್ಧಶತಕ ಗಳಿಸಿ ನೆರವಾದರು. ಮತ್ತೋರ್ವ ಆರಂಭಿಕ ರೀಜಾ ಹೆನ್ರಿಕ್ಸ್​ ಕೇವಲ 11 ರನ್​ಗೆ ವಿಕೆಟ್​ ಒಪ್ಪಿಸಿದರು. ಕ್ವಿಂಟನ್​ಗೆ ನಾಯಕ ಎಡನ್​ ಮಾರ್ಕ್ರಮ್ (46)​ ಉತ್ತಮ ಸಾಥ್​ ನೀಡಿದರು. ಈ ಜೋಡಿ ಎರಡನೇ ವಿಕೆಟ್​ಗೆ ಭರ್ಜರಿ 110 ರನ್​ ಸೇರಿಸಿ, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು.

74 ರನ್​ ಬಾರಿಸಿದ ಡಿ ಕಾಕ್ ಹರ್ಮೀತ್​ ಸಿಂಗ್​ ಬೌಲಿಂಗ್​ನಲ್ಲಿ ಔಟಾದರು. ಬಳಿಕ ಬಂದ ಡೆವಿಡ್​ ಮಿಲ್ಲರ್ ಶೂನ್ಯ ಸುತ್ತಿದರು. ಇದಾದ ಕೆಲಹೊತ್ತಲ್ಲೇ ಅರ್ಧಶತಕದ ಅಂಚಿನಲ್ಲಿದ್ದ ಮಾರ್ಕ್ರಮ್ ಕೂಡ ನೆಟ್ರಾವಾಲ್ಕರ್​ ಬೌಲಿಂಗ್​ನಲ್ಲಿ ಎಡವಿದರು. ತದನಂತರ, ಹೆನ್ರಿಚ್ ಕ್ಲಾಸಿನ್​ (36) ಹಾಗೂ ಟ್ರಿಸ್ಟಾನ್​ ಸ್ಟಬ್ಸ್​ (20) ಜೋಡಿ ಅಜೇಯ ಆಟವಾಡಿ ತಂಡದ ಮೊತ್ತವನ್ನು 194ಕ್ಕೆ ಕೊಂಡೊಯ್ದಿತು. ಇವರಿಬ್ಬರೂ 5ನೇ ವಿಕೆಟ್​ಗೆ 53 ರನ್​ ಸೇರಿಸಿದರು.

195 ರನ್​ ಗುರಿ ಬೆನ್ನಟ್ಟಿದ ಅಮೆರಿಕ​ ಅಬ್ಬರದ ಆರಂಭ ಪಡೆದರೂ ನಿರಂತರವಾಗಿ ವಿಕೆಟ್​ ಕಳೆದುಕೊಳ್ಳುತ್ತಲೇ ಸಾಗಿತು. ಆರಂಭಿಕ ಸ್ಟಿವನ್​ ಟೇಲರ್​ 14 ಎಸೆತಗಳಲ್ಲಿ 24 ರನ್​ ಬಾರಿಸಿ ಮೊದಲಿಗರಾಗಿ ವಿಕೆಟ್​ ಒಪ್ಪಿಸಿದರು. ಮತ್ತೊಂದೆಡೆ, ವಿಕೆಟ್​ ಕೀಪರ್​ ಆಡ್ರಿಸ್​ ಗೌಸ್​ ಅಜೇಯ 80 ರನ್​ ಗಳಿಸಿದರೂ ಸಹ ತಂಡವನ್ನು ಗೆಲ್ಲಿಸಲಾಗಲಿಲ್ಲ.

ಒಂದು ಹಂತದಲ್ಲಿ 76 ರನ್​ಗೆ 5 ವಿಕೆಟ್​ ಕಳೆದುಕೊಂಡಿದ್ದ ಅಮೆರಿಕ ಸೋಲಿನತ್ತ ಮುಖ ಮಾಡಿತ್ತು. ನಿತೀಶ್​ ಕುಮಾರ್​ 8, ನಾಯಕ ಆ್ಯರೋನ್​ ಜೋನ್ಸ್​ 0, ಅನುಭವಿ ಕೋರಿ ಆ್ಯಂಡರ್ಸನ್​ 12 ಹಾಗೂ ಶಾಯನ್​ ಜಹಂಗಿರ್​ 3 ರನ್​ಗೆ ವಿಕೆಟ್​ ಒಪ್ಪಿಸಿದ್ದರು. ಆಗ ಒಂದಾದ ಹರ್ಮೀತ್​ ಸಿಂಗ್ (38) ಹಾಗೂ ಆಡ್ರಿಸ್​ ಗೌಸ್ 6ನೇ ವಿಕೆಟ್​ಗೆ 91 ರನ್​ ಜೊತೆಯಾಟವಾಡಿ, ಯುಎಸ್​ಗೆ ಗೆಲವಿನ ಭರವಸೆ ಮೂಡಿಸಿದ್ದರು.

ಕೊನೆಯ ಎರಡು ಓವರ್​ಗಳಲ್ಲಿ ಗೆಲುವಿಗೆ 27 ರನ್​ ಆಗತ್ಯವಿದ್ದಾಗ ಹರ್ಮೀತ್​ ಸಿಂಗ್ ಔಟಾದರು. ಅಲ್ಲದೆ, ರಬಾಡ ಎಸೆದ 19ನೇ ಓವರ್​ನಲ್ಲಿ ಹರ್ಮೀತ್ ವಿಕೆಟ್​ ಕಳೆದುಕೊಂಡಿದ್ದಲ್ಲದೆ, ಕೇವಲ 2 ರನ್​ಗಳು​ ಬಂದವು. ಇದರಿಂದಾಗಿ ಕೊನೆಯ ಓವರ್​ನಲ್ಲಿ 25 ರನ್​ ಬಾರಿಸುವ ಆಗತ್ಯವಿತ್ತು. ಕೇವಲ 7 ರನ್​ ಗಳಿಸಲಷ್ಟೇ ಶಕ್ತವಾದ ಅಮೆರಿಕ 20 ಓವರ್​ಗಳಲ್ಲಿ 6 ವಿಕೆಟ್​ಗೆ 176 ರನ್​​ ಗಳಿಸಿ, 18 ರನ್​ ಅಂತರದ ಸೋಲು ಕಂಡಿತು. ಹರಿಣಗಳ ಪರ ಕಗೀಸೊ ರಬಾಡಾ 18 ರನ್​ಗೆ 3 ವಿಕೆಟ್​ ಕಬಳಿಸಿದರು. ಸೂಪರ್​-8 ಹಂತದ ಮೊದಲ ಪಂದ್ಯ ಗೆದ್ದ ಮಾರ್ಕ್ರಮ್​ ಪಡೆ ಶುಭಾರಂಭ ಮಾಡಿತು.

ಇದನ್ನೂ ಓದಿ:ಬೆಂಗಳೂರಲ್ಲಿ ರನ್​ ಹೊಳೆ ಹರಿಸಿದ ವನಿತೆಯರು! 646 ರನ್, 4 ಸೆಂಚುರಿ; ರೋಚಕ ಪಂದ್ಯ ಗೆದ್ದು ಬೀಗಿದ ಭಾರತ - India Beat South Africa

ABOUT THE AUTHOR

...view details