SL vs SA 1st Test: ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಮೊದಲ ಟೆಸ್ಟ್ನಲ್ಲೇ ಕೆಟ್ಟದಾಖಲೆ ಬರೆದಿದೆ. ದಕ್ಷಿಣ ಆಫ್ರಿಕಾ ವಿರುದ್ದದ ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶ್ರೀಲಂಕಾ ಕೇವಲ 42 ರನ್‌ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ 50 ವರ್ಷಗಳ ಬಳಿಕ ಇನ್ನಿಂಗ್ಸ್‌ವೊಂದರಲ್ಲೇ 42 ರನ್‌ಗಳಿಗೆ ಆಲೌಟ್ ಆದ ತಂಡವಾಗಿ ಕೆಟ್ಟ ದಾಖಲೆ ಬರೆದಿದೆ.
ಮಳೆ ಪೀಡಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಹರಿಣ ಪಡೆ 191 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ಗೆ ಬಂದ ಲಂಕನ್ನರು ಪೆವಿಲಿಯನ್ ಪರೇಡ್ ಮಾಡಿದರು. ಕಮಿಂದು ಮೆಂಡಿಸ್ (13), ಲಹಿರು ಕುಮಾರ (10) ಹೊರತು ಪಡಿಸಿ ಉಳಿದ ಬ್ಯಾಟರ್ಗಳು ಎರಡಂಕಿ ತಲುಪಲು ಸಾಧ್ಯವಗದೇ 10 ರನ್ ಗಳೊಳಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ದಿನೇಶ್ ಚಾಂಡಿಮಾಲ್, ಕುಶಾಲ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ವಿಶ್ವ ಫೆರ್ನಾಂಡೋ ಮತ್ತು ಅಸಿತಾ ಫೆರ್ನಾಂಡೋ ಒಟ್ಟು 5 ಆಟಗಾರರು ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಇದರಿಂದಾಗಿ ಶ್ರೀಲಂಕಾ ಕೇವಲ 13.5 ಓವರ್‌ಗಳಲ್ಲಿ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.
ಇದೇ ಮೊದಲ: ಶ್ರೀಲಂಕಾ ಟೆಸ್ಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿ 50 ರನ್‌ಗಳ ಗಡಿ ತಲುಪದೇ ತಂಡ ಆಲೌಟ್ ಆಗಿದೆ. ಇದಕ್ಕೂ ಮುನ್ನ 1994ರಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ 71 ರನ್‌ಗಳಿಗೆ ಆಲೌಟ್ ಆಗಿತ್ತು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಕಡಿಮೆ ಮೊತ್ತಕ್ಕೆ ತಂಡವೊಂದನ್ನ ಆಲೌಟ್ ಮಾಡಿ ದಾಖಲೆ ಬರೆಯಿತು. ಇದಕ್ಕೂ ಮುನ್ನ 2013 ರಲ್ಲಿ ನ್ಯೂಜಿಲೆಂಡ್ ತಂಡವನ್ನು 45 ರನ್‌ಗಳಿಗೆ ಕಟ್ಟಿ ಹಾಕಿತ್ತು.