ಶಿವಮೊಗ್ಗ:ಮಲೆನಾಡಿನ ಯುವ ಪ್ರತಿಭೆ ಲೋಹಿತ್.ಎಸ್ 19 ವರ್ಷದೊಳಗಿನ ಕರ್ನಾಟಕ 11 ತಂಡಕ್ಕೆ ಆಯ್ಕೆಯಾಗಿದ್ದಾರೆ. 5ನೇ ವರ್ಷದಿಂದಲೇ ಕ್ರಿಕೆಟ್ ಅಭ್ಯಾಸ ಆರಂಭಿಸಿರುವ ಇವರು ಶಿವಮೊಗ್ಗದ ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಲೋಹಿತ್ ದಾಖಲೆ:ವಲಯ ಮಟ್ಟದ ಕ್ರಿಕೆಟ್ ಆಡಿರುವ ಅನುಭವ ಹೊಂದಿರುವ ಲೋಹಿತ್ ಅಂಡರ್-14, ಅಂಡರ್-16 ಹಾಗೂ ಅಂಡರ್-19 ವಲಯ ಟೂರ್ನಿಗಳಲ್ಲಿ ಭಾಗಿಯಾಗಿದ್ದಾರೆ. ಸ್ಟೇಟ್ ಇಂಟರ್‌ಜೋನ್ ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ 25 ವಿಕೆಟ್ ಪಡೆದು ಆಯ್ಕೆಗಾರರ ಗಮನ ಸೆಳೆದಿದ್ದರು. ಇದು ಇವರ ಇದುವರೆಗಿನ ಉತ್ತಮ ಪ್ರದರ್ಶನ. ಕಳೆದ ತಿಂಗಳು ಒಡಿಶಾದ ಕಟಕ್ನಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿಯೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
ನ.13 (ಬುಧವಾರ)ರಿಂದ ನ.21ರವರೆಗೆ ನಡೆಯಲಿರುವ 19 ವರ್ಷದೊಳಗಿನ ಕ್ರಿಕೆಟ್ ಪಂದ್ಯಾವಳಿಗೆ ಲೋಹಿತ್, ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನೇಪಾಳದ ಅಂಡರ್-19 ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ತಂಡದೊಂದಿಗೆ ಕರ್ನಾಟಕ ಆಡಲಿದೆ. ಇದು ಆಹ್ವಾನಿತ ಪಂದ್ಯಾವಳಿ. ಲೋಹಿತ್.ಎಸ್ ಮುಂದೆ ಬಿಸಿಸಿಐ ನಡೆಸುವ ವಿವಿಧ ಟ್ರೋಫಿಗಳ ಪಂದ್ಯಗಳಲ್ಲೂ ಭಾಗವಹಿಸಲಿದ್ದಾರೆ. ನಗರದ ಪ್ರಖ್ಯಾತ ಕ್ಲಬ್ಗಳಲ್ಲಿ ಒಂದಾದ FCC ಪರ ಪ್ರಥಮ ದರ್ಜೆಯ ಪಂದ್ಯಾವಳಿಗಳಲ್ಲೂ ಇವರು ಭಾಗಿಯಾಗುತ್ತಿದ್ದಾರೆ.