ಪ್ಯಾರಿಸ್:ವಿಶ್ವದ ನಂ.1 ಬ್ಯಾಡ್ಮಿಂಟನ್ ಜೋಡಿ, ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಫ್ರೆಂಚ್ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದರು. ಇದು ಅವರ ಎರಡನೇ ಪ್ರಶಸ್ತಿಯಾಗಿದೆ. ಭಾನುವಾರ ಇಲ್ಲಿ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಚೀನಾ ತೈಪೆಯ ಲೀ ಜೆ-ಹುಯಿ ಮತ್ತು ಯಾಂಗ್ ಪೊ-ಹ್ಸುವಾನ್ ವಿರುದ್ಧ 21-11, 21-17 ನೇರ ಗೇಮ್‌ಗಳಿಂದ ಜಯ ಸಾಧಿಸಿದರು.
ವಿಶ್ವದ ನಂ.1 ಭಾರತೀಯ ಜೋಡಿಯು 2022 ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿತ್ತು. 2019 ಮತ್ತು 2023 ರಲ್ಲಿ ರನ್ನರ್ ಅಪ್ ಆಗಿತ್ತು. ಜೊತೆಗೆ ಈ ವರ್ಷದ ಮೊದಲ ಪ್ರಶಸ್ತಿಯನ್ನು ಬಾಚಿಕೊಂಡಿತು. ಇದಕ್ಕೂ ಮೊದಲು ನಡೆದ ಮಲೇಷ್ಯಾ ಸೂಪರ್ 1000, ಇಂಡಿಯಾ ಸೂಪರ್ 750 ನಲ್ಲಿ ರನ್ನರ್ ಅಪ್ ಆಗಿದ್ದರು. ಚೀನಾ ಮಾಸ್ಟರ್ಸ್ ಸೂಪರ್ 750 ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.
ಚೀನೀ ಜೋಡಿ ವಿರುದ್ಧ ಪಾರಮ್ಯ:ಚೀನಾ ಜೋಡಿಯ ವಿರುದ್ಧ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತದ ಜೋಡಿ ನಿಖರ ಪಾರಮ್ಯ ಮೆರೆಯಿತು. ಮೊದಲ ಗೇಮ್ನ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಸಾಚಿ ಜೋಡಿ ವಿರಾಮದ ವೇಳೆಗೆ 11-6 ರಲ್ಲಿದ್ದರು. ಬಳಿಕ ಚೀನೀ ಜೋಡಿಯನ್ನು ತಪ್ಪು ಮಾಡುವಂತೆ ಆಟವಾಡಿ 14-6 ಮುನ್ನಡೆ ಪಡೆದರು. ಬಳಿಕ 21-11 ರಲ್ಲಿ ಮೊದಲ ಗೇಮ್ ಅನ್ನು ವಶಕ್ಕೆ ಪಡೆದರು.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌ಗಳಾದ ಸಾಚಿ ಜೋಡಿ ಎರಡನೇ ಗೇಮ್ನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಲೀ ಮತ್ತು ಯಾಂಗ್ ಜೋಡಿ 4-1 ಮುನ್ನಡೆ ಸಾಧಿಸಿತು. ಈ ವೇಳೆ ಉತ್ತಮ ಸ್ಮ್ಯಾಷ್ಗಳನ್ನು ಬಾರಿಸುವ ಮೂಲಕ ಭಾರತೀಯ ಜೋಡಿ 11-9 ರಲ್ಲಿ ಮುನ್ನಡೆ ಪಡೆದರು. ಪೈಪೋಟಿಯಲ್ಲೇ ಸಾಗಿದ ಸೆಟ್ನಲ್ಲಿ ಚೀನಿ ಜೋಡಿ ಕೂಡ ಉತ್ತಮ ಆಟವಾಡಿತು. ಆದರೆ, ಛಲ ಬಿಡಿದ ಸಾಚಿ ಜೋಡಿ 21-17 ರಲ್ಲಿ ಗೇಮ್ ಮುಗಿಸಿದರು.