Sanju Samson Father Allegation: ಭಾರತ ಕ್ರಿಕೆಟ್ ತಂಡ ಟಿ20 ಸರಣಿಗಾಗಿ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ಸರಣಿಗಾಗಿ ಆಯ್ಕೆಯಾದ ತಂಡದಲ್ಲಿ ಸಂಜು ಸ್ಯಾಮ್ಸನ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಸಂಜು, ಶತಕ ಸಿಡಿಸಿ ಹರಿಣಗಳ ವಿರುದ್ಧ ಘರ್ಜಿಸಿದ್ದರು. ಅಲ್ಲದೇ ಈ ಪಂದ್ಯವನ್ನೂ ಟೀಂ ಇಂಡಿಯಾ ಗೆದ್ದುಕೊಂಡಿತ್ತು. ನಂತರ ನಡೆದ ಎರಡು ಪಂದ್ಯಗಳಲ್ಲಿ ಸಂಜು ಶೂನ್ಯ ಸುತ್ತಿದ್ದಾರೆ.
ಏತನ್ಮಧ್ಯೆ, ಸಂಜು ಸ್ಯಾಮ್ಸನ್ ಅವರ ತಂದೆ ನಾಲ್ವರು ಹಿರಿಯ ಆಟಗಾರರ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ಆ ನಾಲ್ವರಿಂದ ನನ್ನ ಮಗನ 10 ವರ್ಷದ ಕ್ರಿಕೆಟ್ ಕೆರಿಯರ್ ಹಾಳಾಯಿತು ಎಂದು ಆರೋಪಿಸಿದ್ದಾರೆ.
ಹೌದು, ಸಂಜು ಸ್ಯಾಮ್ಸನ್ ಅವರ ತಂದೆ ವಿಶ್ವನಾಥ್ ಆರೋಪ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಳೆದ ಹತ್ತು ವರ್ಷದಲ್ಲಿ ಟೀಂ ಇಂಡಿಯಾದ 3 ಮಾಜಿ ನಾಯಕರು ಮತ್ತು ಒಬ್ಬ ತರಬೇತುದಾರನಿಂದಾಗಿ ಮಗನ ಕ್ರಿಕೆಟ್ ಕೆರಿಯರ್ ಹಾಳಾಗಿದೆ ಎಂದಿದ್ದಾರೆ.
ಮಲಯಾಳಂನ ಖಾಸಗಿ ಮಾಧ್ಯಮದಲ್ಲಿ ಮಾತನಾಡಿರುವ ಅವರು, ಟೀಂ ಇಂಡಿಯಾದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ, ಧೋನಿ, ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಂದ ತಮ್ಮ ಮಗನ ಹತ್ತು ವರ್ಷದ ಕ್ರಿಕೆಟ್ ಹಾಳಾಗಿದೆ. ಇದರಿಂದಾಗಿ ಸಂಜು ತುಂಬಾ ನೊಂದುಕೊಂಡಿದ್ದ. ಇದೀಗ ಚೇತರಿಸಿಕೊಂಡಿದ್ದಾನೆ ಎಂದಿದ್ದಾರೆ. ಇದೇ ವೇಳೆ ಸಂಜು ಸ್ಯಾಮ್ಸನ್ ಅವರ ತಂದೆ ಪ್ರಸ್ತುತ ಟೀಂ ಇಂಡಿಯಾದ ಕೋಚ್ ಮತ್ತು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.