ನವದೆಹಲಿ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೇವಲ ಒಂದೇ ದಿನ ಬಾಕಿ ಇದೆ. ಇದರ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ತಂಡದ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ ಬದಲಿಗೆ ರುತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದಾರೆ.
ತಮಿಳುನಾಡಿನ ಚೆನ್ನೈನ ಚೆಪಾಕ್‌ನ ಸ್ಟೇಡಿಯಂನಲ್ಲಿ ಮಾರ್ಚ್ 22ರಂದು ಐಪಿಎಲ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಮುಖಾಮುಖಿಯಾಗಲಿವೆ. 14 ಆವೃತ್ತಿಗಳಲ್ಲಿ ಚೆನ್ನೈ ತಂಡವನ್ನು ಎಂ.ಎಸ್.ಧೋನಿ ಮುನ್ನಡೆಸಿದ್ದರು. ಈ ಬಾರಿ ಕೂಡ ತಂಡವನ್ನು ಧೋನಿ ಅವರೇ ಮುನ್ನಡೆಸುತ್ತಾರೆ ಎಂದು ನಿರೀಕ್ಷಿಸುತ್ತಿದ್ದ ಸಿಎಸ್‌ಕೆ ಅಭಿಮಾನಿಗಳಿಗೆ ಈ ಬೆಳವಣಿಗೆ ಶಾಕ್ ನೀಡಿದೆ.
ಕಳೆದ ಋತುವಿನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಮತ್ತು ಫ್ರಾಂಚೈಸಿಗೆ ಪ್ರಮುಖ ಪಾತ್ರ ವಹಿಸಿದ್ದ ರುತುರಾಜ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ. ರುತುರಾಜ್ 42.14ರ ಸರಾಸರಿಯೊಂದಿಗೆ 590 ರನ್ ಗಳಿಸಿದ್ದರು. ಫ್ರಾಂಚೈಸಿಗೆ ಒಳ್ಳೆಯ ಆರಂಭಿಕ ಸ್ಟ್ಯಾಂಡ್‌ಗಳನ್ನು ಒದಗಿಸಿದ್ದರು. ನಾಳೆ ಆರ್‌ಸಿಬಿ ವಿರುದ್ಧದ ಪಂದ್ಯದ ಮೂಲಕ ಸಿಎಸ್‌ಕೆ ತನ್ನ ಅಭಿಯಾನ ಆರಂಭಿಸಲಿದೆ. ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ತಂಡವು ಈ ಬಾರಿಯೂ ಪ್ರಶಸ್ತಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳುವ ಗುರಿ ಹೊಂದಿದೆ.