ಚೆನ್ನೈ ( ತಮಿಳುನಾಡು) :ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವಇಂಡಿಯನ್ ಪ್ರೀಮಿಯರ್ ಲೀಗ್ 2024ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 174 ರನ್ಗಳ ಗುರಿ ನೀಡಿದೆ.
ಕುಸಿದ ಆರ್ಸಿಬಿ ತಂಡಕ್ಕೆ ಆಸರೆಯಾದ ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್ ಜೋಡಿ 50 ಎಸೆತಗಳಲ್ಲಿ 95 ರನ್ ಜೊತೆಯಾಟವಾಡಿತು. ಈ ಮೂಲಕ ಆರ್ಸಿಬಿ ಬೃಹತ್ ರನ್ ಕಲೆ ಹಾಕಲು ಸಾಧ್ಯವಾಯಿತು. ಚೆನ್ನೈ ಪರ ಮುಸ್ತಾಫಿಜುರ್ ರೆಹಮಾನ್ ಪ್ರಮುಖ ನಾಲ್ಕು ವಿಕೆಟ್ಗಳನ್ನು ಪಡೆದರೆ, ದೀಪಕ್ ಚಹಾರ್ ತಲಾ ಒಂದು ವಿಕೆಟ್ ಪಡೆದು ತೃಪ್ತಿ ಪಟ್ಟರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರು ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಿದರು. ಆರ್ಕಷಕ ಹೊಡೆತಗಳನ್ನು ಹೊಡೆಯುವ ಮೂಲಕ ಬೃಹತ್ ರನ್ ಕಲೆಹಾಕುವ ಲೆಕ್ಕಚಾರದಲ್ಲಿದ ಫಾಫ್ ಡು ಪ್ಲೆಸಿಸ್ (35) ಮುಸ್ತಾಫಿಜುರ್ ರೆಹಮಾನ್ ಬೌಲಿಂಗ್ನಲ್ಲಿ ರಚಿನ್ ರವೀಂದ್ರಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ರಜತ್ ಪಾಟಿದಾರ್ ನನ್ನು ಶೂನ್ಯಕ್ಕೆ ಮುಸ್ತಾಫಿಜುರ್ ಔಟ್ ಮಾಡಿದರು. ಹಿಂದೆಯೇ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಗೋಲ್ಡನ್ ಡಕ್ ಔಟ್ ಆಗುವ ಮೂಲಕ ದೀಪಕ್ ಚಹರ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಪ್ರಮುಖ ಮೂರು ವಿಕೆಟ್ ಕೆಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿದ ಆರ್ಸಿಬಿ ತಂಡಕ್ಕೆ ಭರವಸೆ ಆಟಗಾರ ಕ್ಯಾಮೆರಾನ್ ಗ್ರೀನ್ ಮತ್ತು ವಿರಾಟ್ ಕೊಹ್ಲಿ ಆಸರೆಯಾಗುವ ಮುನ್ಸೂಚನೆ ನೀಡಿದರು. ಆದರೆ, ಮತ್ತೆ ದಾಳಿಗೆ ಇಳಿದ ಬಾಂಗ್ಲಾ ವೇಗಿ ಮುಸ್ತಾಫಿಜುರ್ ಒಂದೇ ಓವರ್ನಲ್ಲಿ ವಿರಾಟ್ ಕೊಹ್ಲಿ (21) ಮತ್ತು ಕ್ಯಾಮೆರಾನ್ ಗ್ರೀನ್ (18) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.