ಹೈದರಾಬಾದ್: ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆಗಳ ಹಿಂದೆ ಓಡುವುದಿಲ್ಲ, ಬದಲಿಗೆ ಅವರ ಹಿಂದೆಯೇ ದಾಖಲೆಗಳು ಬರುತ್ತವೆ ಎಂಬ ಅಭಿಮಾನಿಗಳ ಮಾತು ಅಕ್ಷರಶಃ ನಿಜವಾಗಿದೆ. ಮೈದಾನದಲ್ಲಿ ದಾಖಲೆಗಳನ್ನು ನಿರ್ಮಿಸಿರುವ ಖ್ಯಾತ ಫುಟ್ಬಾಲರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅಂದರೇ ಆಗಸ್ಟ್ 21ರಂದು ಪೋರ್ಚುಗೀಸ್ ಸ್ಟ್ರೈಕರ್ ರೊನಾಲ್ಡೊ 'ಯುಆರ್ ಕ್ರಿಸ್ಟಿಯಾನೋ' ಹೆಸರಿನ ಯೂಟ್ಯೂಬ್ ಚಾನೆಲ್ ಅನಾವರಣಗೊಳಿಸಿದ್ದರು. ಚಾನೆಲ್ ಬಿಡುಗಡೆಗೊಂಡ 90 ನಿಮಿಷಗಳಲ್ಲೇ 1 ಮಿಲಿಯನ್ ಚಂದಾದಾರರನ್ನು ಪಡೆದಿತ್ತು. ಅತ್ಯಂತ ವೇಗವಾಗಿ 10 ಲಕ್ಷ ಪೂರೈಸಿದ ಯೂಟ್ಯೂಬ್ ಚಾನೆಲ್ ಎಂಬ ದಾಖಲೆಯನ್ನೂ ಬರೆಯಿತು. ಆದರೆ ಅವರ ಈ ದಾಖಲೆಗಳು ಇಲ್ಲಿಗೆ ಮಗಿದಿಲ್ಲ. ದಿನ ಕಳೆದಂತೆ ಹೊಸ ದಾಖಲೆಗಳು ಸೃಷ್ಠಿಯಾಗುತ್ತಿವೆ. ಇದೀಗ ಎರಡೇ ದಿನಗಳಲ್ಲಿ ಅವರ ಚಾನೆಲ್ 30 ಮಿಲಿಯನ್‌ಗಿಂತಲೂ ಹೆಚ್ಚಿನ ಚಂದಾದಾರರನ್ನು ಪಡೆದು ಮುನ್ನುಗ್ಗುತ್ತಿದೆ.
ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇದುವರೆಗೆ ಕೇವಲ 19 ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ಪ್ರತಿ ವೀಡಿಯೊ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ರೊನಾಲ್ಡೊ ಮತ್ತು ಅವರ ಪತ್ನಿ ಜಾರ್ಜಿಯಾ ತಮ್ಮ ಮತ್ತು ಅವರ ಸಂಬಂಧದ ಬಗ್ಗೆ ಮಾತನಾಡುವ ವೀಡಿಯೊ 10 ಮಿಲಿಯನ್ಗೂ ಹೆಚ್ಚಿನ ವೀಕ್ಷಣೆ ಪಡೆದಿದೆ.
ಚಾನೆಲ್ ಆರಂಭಿಸಿದ 90 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದ ಕಾರಣ ಅವರಿಗೆ ಯೂಟ್ಯೂಬ್ ಗೋಲ್ಡನ್ ಬಟನ್ ಅನ್ನು ಸಹ ನೀಡಲಾಗಿದೆ. ಇದೀಗ ಅವರು ಡೈಮಂಡ್ ಬಟನ್‌ಗೂ ಅರ್ಹರಾಗಿದ್ದಾರೆ. ಇದನ್ನು ಸಾಧಿಸಲು ಹಲವಾರು ಯೂಟ್ಯೂಬರ್ಗಳ ವರ್ಷಾನುಗಟ್ಟಲೆ ಶ್ರಮವಹಿಸುತ್ತಿದ್ದರೆ 39 ವರ್ಷದ ರೊನಾಲ್ಡೊ ಕೇವಲ 10 ಗಂಟೆಗಳಲ್ಲಿ ಇದನ್ನು ಸಾಧಿಸಿದ್ದಾರೆ.