ನವದೆಹಲಿ:ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಹಿಟ್‌ಮ್ಯಾನ್ ಭಾರತ ತಂಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಇಡೀ ವಿಶ್ವವೇ ಅವರ ನಾಯಕತ್ವವನ್ನು ಕೊಂಡಾಡುತ್ತಿದೆ. ಎಲ್ಲ ಮೂರು ಸ್ವರೂಪದ ಕ್ರಿಕೆಟ್ಗಳಲ್ಲಿ ರೋಹಿತ್ ಶರ್ಮಾ ಅವರು ನೀಡಿರುವ ಕೊಡುಗೆ ಮೌಲ್ಯಯುತವಾಗಿದೆ. ತಮ್ಮ ಕ್ರಿಕೆಟ್ ಜರ್ನಿಯಲ್ಲಿ ಹಲವಾರು ದಾಖಲೆಗಳನ್ನೂ ರೋಹಿತ್ ಶರ್ಮಾ ಬರೆದಿದ್ದಾರೆ ಅದರಲ್ಲಿ ಕೆಲ ದಾಖಲೆಗಳು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.
ಕ್ರಿಕೆಟ್ ಜರ್ನಿ:2007ರಲ್ಲಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದೇ ವರ್ಷ ನಡೆದ ಐಸಿಸಿ T20 ವಿಶ್ವಕಪ್‌ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ಅವರು 88 ರನ್ ಗಳಿಸಿದ್ದರು. ಐರ್ಲೆಂಡ್ ವಿರುದ್ಧ ಅರ್ಧಶತಕ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ 30 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಆರು ವರ್ಷಗಳ ಕಾಲ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಶಿಖರ್ ಧವನ್ ಅವರೊಂದಿಗೆ ಓಪನರ್ ಆಗಿ ಆಡುವ ಅವಕಾಶವನ್ನು ಪಡೆದಿದ್ದರು. ಇದೇ ರೋಹಿತ್ ವೃತ್ತಿ ಜೀವನಕ್ಕೆ ತಿರುವನ್ನು ನೀಡಿತು. ಈ ಟೂರ್ನಿಯಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 35.40 ಸರಾಸರಿಯಲ್ಲಿ ಎರಡು ಅರ್ಧ ಶತಕಗಳನ್ನು ಒಳಗೊಂಡಂತೆ 177 ರನ್ ಕಲೆಹಾಕಿದ್ದರು.
ಅಂದಿನಿಂದ ಓಪನರ್ ಆಗಿ ಇನ್ನಿಂಗ್ಸ್ ಆರಂಭಿಸಿದ ರೋಹಿತ್ 262 ODIಗಳಲ್ಲಿ 49.12ರ ಸರಾಸರಿಯಲ್ಲಿ 10709 ರನ್ ಗಳಿಸಿದ್ದಾರೆ. ಇದರಲ್ಲಿ 31 ಶತಕಗಳು ಮತ್ತು 55 ಅರ್ಧಶತಕಗಳನ್ನು ಸೇರಿವೆ, 264 ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಆಗಿದ್ದು, ಇದು ODI ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟರೊಬ್ಬ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಈ ದಾಖಲೆಯನ್ನು ಇದೂವರೆಗೂ ಯಾರೊಬ್ಬರಿಗೆ ಮುರಿಯಲು ಸಾಧ್ಯವಾಗಿಲ್ಲ.
ಎಂಎಸ್ ಧೋನಿ (10599), ರಾಹುಲ್ ದ್ರಾವಿಡ್ (10,768), ಸೌರವ್ ಗಂಗೂಲಿ (11,221), ವಿರಾಟ್ ಕೊಹ್ಲಿ (13848) ಮತ್ತು ಸಚಿನ್ ತೆಂಡೂಲ್ಕರ್ (18426) ನಂತರ ಆರನೇ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರಾಗಿದ್ದಾರೆ. ವಿರಾಟ್ (50) ಮತ್ತು ಸಚಿನ್ (49) ನಂತರ 31 ಶತಗಳನ್ನು ಸಿಡಿಸಿ ಮೂರನೇ ಅತಿ ಹೆಚ್ಚು ODI ಶತಕಗಳನ್ನು ಬಾರಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ.