ಕಾನ್ಪುರ (ಉತ್ತರ ಪ್ರದೇಶ): ಕಾನ್ಪುರದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೇ ಇಂದು 2ನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಬಂದಿರುವ ಬಾಂಗ್ಲಾದೇಶ ತಂಡಕ್ಕೆ ವೇಗಿ ಆಕಾಶ್ದೀಪ್ ಎರಡು ವಿಕೆಟ್ ಉರುಳಿಸುವ ಮೂಲಕ ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದಾರೆ.
ಇದರೊಂದಿಗೆ ಬಾಂಗ್ಲಾ ತಂಡ 32 ಓವರ್ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ನಷ್ಟಕ್ಕೆ 93 ರನ್ಗಳಿಸಿದೆ. ಬಾಂಗ್ಲಾ ಪರ ಆರಂಭಿಕ ಬ್ಯಾಟರ್ ಜಾಕೀರ್ ಹಸನ್ ಶೂನ್ಯಕ್ಕೆ ನಿರ್ಗಮಿಸಿದರೇ, ಇಸ್ಲಾಂ 24 ರನ್ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ಶಾಂಟೋ (31) ಕೂಡ ಅಶ್ವಿನ್ ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ದಾರೆ. ಸದ್ಯ ಮುಶಫಿಕರ್ ರೆಹಮಾನ್ ಮತ್ತು ಮಾಮಿನಲ್ ಹಖ್ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಏತನ್ಮಧ್ಯೆ ಈ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಶಾಕಿಂಗ್ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ.
ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಅಚ್ಚರಿಗೆ ದೂಡಿದ ರೋಹಿತ್:ಹೌದು, ಕಾನ್ಪುರದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶಾಕಿಂಗ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಅರೇ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದರಲ್ಲೇನಿದೆ ಅಚ್ಚರಿ ಎಂದೇನಿಸಬಹುದು. ಸಾಮಾನ್ಯವಾಗಿ ತವರು ನೆಲದಲ್ಲಿನ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದರೆ ಮೊದಲಿಗೆ ಬ್ಯಾಟಿಂಗ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಅದರಲ್ಲೂ ಕಾನ್ಪುರ ಮೈದಾನದಲ್ಲಿ 60 ವರ್ಷಗಳ ಬಳಿಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಈ ಹಿಂದೆ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.