ಮುಲ್ಲನ್‌ಪುರ- ಮೊಹಾಲಿ: ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಫ್ರಾಂಚೈಸಿಗಾಗಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಗುರುವಾರ ಮೊಹಾಲಿಯ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಎಂಐ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ತಮ್ಮ 250 ನೇ ಐಪಿಎಲ್ ಪಂದ್ಯವನ್ನು ಆಡಿದ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನ 11 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬಲಗೈ ವೇಗಿ ಹರ್ಷಲ್ ಪಟೇಲ್ ಎಸೆದ ಬಾಲ್ ಅನ್ನು ಸಿಕ್ಸರ್ಗೆ ಅಟ್ಟುವ ಮೂಲಕ ತಂಡದ ಪರ ಈ ಸಾಧನೆ ಮಾಡಿದರು. ತಂಡದ ಪರ ಅವರು 224 ಸಿಕ್ಸರ್ಗಳನ್ನು ಬಾರಿಸುವ ಮೂಲಕ ರೆಕಾರ್ಡ್ ಬರೆದರು. ಮುಂಬೈ ಇಂಡಿಯನ್ಸ್ ಮಾಜಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ 223 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ, ನಾಯಕ ಹಾರ್ದಿಕ್ ಪಾಂಡ್ಯ (104), ಇಶಾನ್ ಕಿಶನ್ (103), ಮತ್ತು ಸೂರ್ಯಕುಮಾರ್ ಯಾದವ್ (97) ನಂತರದ ಸ್ಥಾನದಲ್ಲಿದ್ದಾರೆ.
ಈ ಪಂದ್ಯಕ್ಕೂ ಮುನ್ನ, ರೋಹಿತ್ 52.20 ಸರಾಸರಿಯೊಂದಿಗೆ 167.31 ಸ್ಟ್ರೈಕ್ ರೇಟ್ನಲ್ಲಿ ರನ್ಗಳನ್ನು ಹರಿಸಿ ಪ್ರೇಕ್ಷಕರನ್ನು ಮನರಂಜನೆಗೊಳಿಸಿದ್ದಾರೆ.