ನ್ಯೂಯಾರ್ಕ್:ಇಲ್ಲಿನ ನಸ್ಸೌ ಕೌಂಟಿ ಮೈದಾನದ ದ್ವಿಸ್ವರೂಪಿ ಪಿಚ್ನಲ್ಲಿ ಆಡುವುದು ಸುಲಭವಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ತಂಡವು ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಕೊನೆಯವರೆಗೂ ಹೋರಾಡುವ ಮೂಲಕ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ ಎಂದಿದ್ದಾರೆ.
ಅರ್ಷದೀಪ್ ಸಿಂಗ್ (9ಕ್ಕೆ 4 ವಿಕೆಟ್), ಸೂರ್ಯಕುಮಾರ್ ಯಾದವ್ (50*) ಮತ್ತು ಶಿವಂ ದುಬೆ (31*) ಜವಾಬ್ದಾರಿಯುತ ಆಟದಿಂದ ಯುಎಸ್ ವಿರುದ್ಧ ಬುಧವಾರ ಭಾರತವು 7 ವಿಕೆಟ್ ಜಯ ಗಳಿಸಿ ಸೂಪರ್-8ಕ್ಕೆ ತಲುಪಿತು. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ''ಪಿಚ್ನಲ್ಲಿ ಬ್ಯಾಟಿಂಗ್ ಕಠಿಣ ಎಂದು ನಮಗೆ ತಿಳಿದಿತ್ತು. ನಾವು ಕ್ರೀಸ್ನಲ್ಲಿ ದೃಢವಾಗಿ ನಿಂತು ಜೊತೆಯಾಟವಾಡಿ ಗೆದ್ದೆವು. ಪ್ರಬುದ್ಧತೆ ತೋರಿದ ಸೂರ್ಯ ಮತ್ತು ಶಿವಂ ದುಬೆಗೆ ಗೆಲುವಿನ ಶ್ರೇಯ ಸಲ್ಲಬೇಕು'' ಎಂದು ಹೇಳಿದರು.
''ನಸ್ಸೌ ಕೌಂಟಿ ಪಿಚ್ನಲ್ಲಿ ಆಡುವುದು ಸರಳವಲ್ಲ, ಸೂಪರ್-8ಕ್ಕೆ ತಲುಪಿರುವ ಸಮಾಧಾನವಿದೆ. ಈ ಮೈದಾನದಲ್ಲಿ ಪಂದ್ಯವನ್ನು ಯಾವ ತಂಡ ಬೇಕಾದರೂ ಗೆಲ್ಲಬಹುದು. ಎಲ್ಲಾ ಮೂರು ಪಂದ್ಯಗಳಲ್ಲಿ ನಾವು ಕೊನೆಯವರೆಗೂ ಹೋರಾಡಿ ಗೆದ್ದೆವು. ಈ ಗೆಲುವಿನಿಂದ ನಮ್ಮ ವಿಶ್ವಾಸ ಹೆಚ್ಚಿದೆ. ಸೂರ್ಯಕುಮಾರ್ ವಿಭಿನ್ನ ಆಟ ತೋರಿದರು. ಅನುಭವಿ ಆಟಗಾರರಿಂದ ನೀವು ನಿರೀಕ್ಷಿಸುವುದು ಅದನ್ನೇ. ಕೊನೆಯವರೆಗೂ ಕ್ರೀಸ್ನಲ್ಲಿದ್ದು, ಪಂದ್ಯ ಗೆಲ್ಲಿಸಿದರು'' ಎಂದು ಶ್ಲಾಘಿಸಿದರು.
''ರನ್ ಗಳಿಕೆ ಕಷ್ಟವಾಗಿದ್ದರಿಂದ ಬೌಲರ್‌ಗಳು ಮೇಲುಗೈ ಸಾಧಿಸುವುದು ಅಗತ್ಯವಿತ್ತು. ವಿಶೇಷವಾಗಿ ಅರ್ಷದೀಪ್ ಸೇರಿದಂತೆ ಎಲ್ಲಾ ಬೌಲರ್‌ಗಳೂ ಆ ಕೆಲಸ ಮಾಡಿದರು. ಬೌಲಿಂಗ್ ಆಯ್ಕೆಗಳು ಇರಬೇಕು, ಅಗತ್ಯವಿದ್ದಾಗ ನಾವು ಬಳಸಲು ಸಾಧ್ಯವಾಗುತ್ತದೆ. ವೇಗಿಗಳು ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿಂದ ದುಬೆಗೆ ಬೌಲಿಂಗ್ ನೀಡಲಾಯಿತು'' ಎಂದರು.
ಅಮೆರಿಕ ತಂಡದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ರೋಹಿತ್, ''ಅವರಲ್ಲಿ ಬಹಳಷ್ಟು ಮಂದಿ ಒಟ್ಟಿಗೆ ಕ್ರಿಕೆಟ್ ಆಡಿದ್ದು, ಪ್ರಗತಿಯನ್ನು ಕಂಡು ಬಹಳ ಸಂತಸವಾಗುತ್ತಿದೆ. ಕಳೆದ ವರ್ಷ ಮೇಜರ್ ಲೀಗ್ ಕ್ರಿಕೆಟ್ (MLC) ಟೂರ್ನಿಯಲ್ಲೂ ಅವರ ಆಟವನ್ನು ನೋಡಿದ್ದೇನೆ. ಎಲ್ಲರೂ ಶ್ರಮವಹಿಸಿ ಆಡುತ್ತಾರೆ'' ಎಂದು ಹೇಳಿದರು.