ನವದೆಹಲಿ: ''ಎಂಎಸ್ ಧೋನಿ ಜೊತೆಗೆ ನನ್ನನ್ನು ಹೋಲಿಸಿಕೊಳ್ಳುವುದು ನನಗೆ ಯಾವಾಗಲೂ ಕಷ್ಟ ಮತ್ತು ಸವಾಲು ಅನ್ನಿಸುತ್ತದೆ. ಆದರೆ, ನಮ್ಮೊಂದಿಗೆ ಮುಕ್ತವಾಗಿ ಮಾತನಾಡಬಹುದಾದ ಕೆಲವು ಜನರು ಇದ್ದೇ ಇರುತ್ತಾರೆ. ಹಾಗೆಯೇ ನಾನು ಧೋನಿ ಅವರೊಂದಿಗೆ ಎಲ್ಲವನ್ನೂ ಬಹಿರಂಗವಾಗಿ ಚರ್ಚಿಸುತ್ತೇನೆ. ಅದು ಈಗಲೂ ಕೂಡ'' ಎಂದು ಭಾರತೀಯ ಕ್ರಿಕೆಟ್ ತಂಡದ ಪಟು ರಿಷಭ್ ಪಂತ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ತಮ್ಮ ನಡುವಿನ ಸ್ನೇಹದ ಬಗ್ಗೆ ಮಾತನಾಡಿದ ರಿಷಭ್ ಪಂತ್, ''ಅವರಿಂದ ನಾನು ತುಂಬಾ ಕಲಿತಿದ್ದೇನೆ. ನಾನು ಯಾರೊಂದಿಗೂ ಚರ್ಚಿಸದ ವಿಷಯಗಳನ್ನು ನಾನು ಅವರೊಂದಿಗೆ ಚರ್ಚಿಸುತ್ತೇನೆ. ಅದು ಅವರ ಜೊತೆಗಿನ ಸಂಬಂಧ'' ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಾಗ ತಾವು ಅನುಭವಿಸಿದ ಕಿರಿಕಿರಿಯನ್ನು ಸಹ ಇದೇ ವೇಳೆ ಬಹಿರಂಗಪಡಿಸಿದ್ದಾರೆ.
''ಅಂತಾರಾಷ್ಟ್ರೀಯ ಕ್ರಿಕೆಟ್ನ ಆರಂಭಿಕ ದಿನಗಳಲ್ಲಿ ಜನರು ತನ್ನನ್ನು ಮಹೇಂದ್ರ ಸಿಂಗ್ ಧೋನಿ ಜತೆಗೆ ಹೋಲಿಕೆ ಮಾಡುತ್ತಿದ್ದರಿಂದ ನಾನು ಬಹಳಷ್ಟು ಕಿರಿಕಿರಿ ಅನುಭವಿಸುತ್ತಿದ್ದೆ. ಧೋನಿ ಅವರೊಂದಿಗಿನ ನಿರಂತರ ಹೋಲಿಕೆಗಳು ಮಾನಸಿಕವಾಗಿ ಕುಸಿತಕ್ಕೆ ತಳ್ಳಿದ್ದವು. ಈ ಬಗ್ಗೆ ನಾನು ಸಾಕಷ್ಟು ನೊಂದಿದ್ದೇನೆ. ನಾನು ಆಗಷ್ಟೇ ತಂಡಕ್ಕೆ ಸೇರಿಕೊಂಡಿದ್ದೆ. ಆದರೆ, ಅಷ್ಟರಲ್ಲೇ ಜನರು ಬದಲಿ ಆಟಗಾರನ್ನು ಕಾಣುತ್ತಿದ್ದರು. ಯುವಕರಲ್ಲಿ ಜನರು ಏಕೆ ಇಂತಹ ಪ್ರಶ್ನೆಗಳನ್ನು ಎತ್ತುತ್ತೀದಿರಿ? ಏಕೆ ಹೋಲಿಕೆ ಮಾಡುತ್ತೀದ್ದೀರಿ? ಎಂಬ ಕೀಳು ಭಾವನೆ ಇತ್ತು. ಆದರೆ, ಯಾವುದೇ ರೀತಿಯ ಹೋಲಿಕೆ ಇರಬಾರದು. ಕಾರಣ ಕೆಲವರು ಐದು ಪಂದ್ಯಗಳನ್ನು ಆಡಿದ್ದಾರೆ ಮತ್ತು ಮತ್ತೊಬ್ಬರು 500 ಪಂದ್ಯಗಳನ್ನು ಆಡಿದ್ದಾರೆ.