ಹೈದರಾಬಾದ್ (ತೆಲಂಗಾಣ): ಭಾರತವು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಸಿದ್ಧವಾಗಿದೆ. ಮೊದಲ ಟೆಸ್ಟ್ ಗುರುವಾರದಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಗೈರು ಹಾಜರಾಗಿದ್ದು, ಅವರ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಎಂಬುದೇ ಚರ್ಚೆಯಾಗಿತ್ತು. ಹಲವರ ಹೆಸರುಗಳು ಕೇಳಿ ಬಂದಿದ್ದವು. ಆದ್ರೆ ವಿರಾಟ್ ಸ್ಥಾನಕ್ಕೆ ಆರ್‌ಸಿಬಿ ಆಟಗಾರ ರಜತ್ ಪಾಟಿದಾರ್ಗೆ ಅವಕಾಶ ಸಿಗಲಿದೆ ಎಂಬ ವರದಿಗಳಿವೆ.
ಬಿಸಿಸಿಐ ಕೂಡ ಅವರ ಬಗ್ಗೆ ಆಸಕ್ತಿ ವಹಿಸಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಮಂಗಳವಾರ ಬಿಸಿಸಿಐ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಟಿದಾರ್ ಭಾಗವಹಿಸಿದ್ದರು. ರಹಾನೆ ಮತ್ತು ಪೂಜಾರ ಅವರನ್ನು ತೆಗೆದುಕೊಳ್ಳಲು ಆಯ್ಕೆ ಸಮಿತಿ ಆಸಕ್ತಿ ಹೊಂದಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಆದ್ರೆ ಇದು ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.
ರಜತ್ ಪಾಟಿದಾರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಕಳೆದ ವಾರ ಅಹಮದಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಭಾರತ-ಎ ಪರ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ 151 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ 111 ರನ್ ಗಳಿಸಿದ್ದರು. 30 ವರ್ಷದ ರಜತ್ ಈವರೆಗೆ 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 45.97 ಸರಾಸರಿಯಲ್ಲಿ 4000 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳಿವೆ. ಮತ್ತು 2021-22ರಲ್ಲಿ ಮಧ್ಯಪ್ರದೇಶ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.