ಕರ್ನಾಟಕ

karnataka

ETV Bharat / sports

ಎಲಿಮಿನೇಟರ್​ ಪಂದ್ಯ: ಆರ್​ಸಿಬಿ ಸಾಧಾರಣ ಬ್ಯಾಟಿಂಗ್​, ರಾಜಸ್ಥಾನಕ್ಕೆ 173 ರನ್​ ಗುರಿ - RR vs RCB Eliminator

ರಾಜಸ್ಥಾನ ರಾಯಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ಎಲಿಮಿನೇಟರ್​ ಪಂದ್ಯ ಅಹಮದಾಬಾದ್​ನಲ್ಲಿ ನಡೆಯುತ್ತಿದೆ.

ಆರಂಭಿಕರಾದ ವಿರಾಟ್​ ಕೊಹ್ಲಿ, ಡು ಪ್ಲೆಸಿಸ್​ ಔಟ್​
ಆರಂಭಿಕರಾದ ವಿರಾಟ್​ ಕೊಹ್ಲಿ, ಡು ಪ್ಲೆಸಿಸ್​ ಔಟ್​ (ETV Bharat)

By ETV Bharat Karnataka Team

Published : May 22, 2024, 8:32 PM IST

Updated : May 22, 2024, 9:29 PM IST

ಅಹಮದಾಬಾದ್​:ಮಹತ್ವದ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ನಿಗದಿತ 20 ಓವರ್​ಗಳಲ್ಲಿ 173 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ. ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ ತಂಡ ರನ್​ ಗಳಿಸಲು ಪರದಾಡಿತು.

ಕಠಿಣ ಪಿಚ್​ನಲ್ಲಿ ಆರಂಭದಿಂದಲೇ ಸತತ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿದ ತಂಡ ಯಾವುದೇ ಹಂತದಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಉತ್ತಮ ಆರಂಭದ ಸುಳಿವು ನೀಡಿದ ವಿರಾಟ್​ ಮತ್ತು ಪ್ಲೆಸಿಸ್​ 37 ರನ್​ ಗಳಿಸುವಷ್ಟರಲ್ಲಿ ಬೇರ್ಪಟ್ಟರು. ಡು ಪ್ಲೆಸಿಸ್​ 17 ರನ್​ ಗಳಿಸಿದ್ದಾಗ, ಬೌಲ್ಟ್​ ಎಸೆತದಲ್ಲಿ ಬಲವಾದ ಹೊಡೆತಕ್ಕೆ ಕೈಹಾಕಿ ವಿಕೆಟ್​ ನೀಡಿದರು. ಬಳಿಕ ವಿರಾಟ್​ ಕೊಹ್ಲಿ ಚಹಲ್​ ಬೌಲಿಂಗ್​ನಲ್ಲಿ ಸಿಕ್ಸರ್​​ ಬಾರಿಸಲು ಮುಂದಾಗಿ ಬೌಂಡರಿ ಗೆರೆಯಲ್ಲಿ ಕ್ಯಾಚ್​ ನೀಡಿದರು. ಅವರು 24 ಎಸೆತಗಳಲ್ಲಿ 33 ರನ್​ ಗಳಿಸಿ ಆಡುತ್ತಿದ್ದರು.

ಬಳಿಕ ಕ್ಯಾಮರೂನ್​ ಗ್ರೀನ್​ ಮತ್ತು ರಜತ್​ ಪಾಟೀದಾರ್​ ಪಾಲುದಾರಿಕೆ ನೀಡಲು ಆರಂಭಿಸಿದರೂ, ಗ್ರೀನ್​ 27 ರನ್​ಗೆ ಆಶ್ವಿನ್​ ಬೌಲಿಂಗ್​ನಲ್ಲಿ ವಿಕೆಟ್​ ನೀಡಿದರು. ಬಳಿಕ ತುಸು ಹೊತ್ತು ಅಬ್ಬರಿಸಿದ ಪಾಟೀದಾರ್ 34 ರನ್​ಗೆ ಔಟಾದರು. ಇನ್ನೂ ಈ ಆವೃತ್ತಿಯಲ್ಲಿ ಭಾರೀ ವೈಫಲ್ಯ ಕಂಡಿರುವ ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತೆ ನಿರಾಸೆ ಮೂಡಿಸಿ ಸೊನ್ನೆಗೆ ವಿಕೆಟ್​ ನೀಡಿದರು. ಮಹಿಪಾಲ್​ ಲೋಮ್ರೊರ್​ 32, ದಿನೇಶ್​ ಕಾರ್ತಿಕ್​ 11, ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬಂದ ಸ್ವಪ್ನಿಲ್​ ಸಿಂಗ್​ 9, ಕರಣ್​ ಶರ್ಮಾ 5 ರನ್​ ಮಾಡಿದರು.

ಬಿಗಿ ಬೌಲಿಂಗ್​ ದಾಳಿ:ರಾಜಸ್ಥಾನದ ಪರವಾಗಿ ಟ್ರೆಂಟ್​ ಬೌಲ್ಟ್​, ಹಿರಿಯ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಬಿಗಿ ಬೌಲಿಂಗ್ ದಾಳಿ ನಡೆಸಿದರು. ಆವೇಶ್​ ಖಾನ್​ 3 ವಿಕೆಟ್​ ಪಡೆದರೂ, 44 ರನ್​ ಬಿಟ್ಟುಕೊಟ್ಟರು. ಬೌಲ್ಟ್​, ಸಂದೀಪ್​ ಶರ್ಮಾ, ಯಜುವೇಂದ್ರ ಚಹಲ್​ ತಲಾ 1 ವಿಕೆಟ್​ ಪಡೆದರು.

ಇನ್ನೂ, ಟಾಸ್​ ಗೆದ್ದ ರಾಜಸ್ಥಾನ ಬೌಲಿಂಗ್ ಆಯ್ದುಕೊಂಡಿತು. ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮೊದಲು ಬ್ಯಾಟ್​ ಮಾಡಿ ಸೋಲು ಕಂಡಿತ್ತು. ಆರ್​ಸಿಬಿಯನ್ನೂ ಮೊದಲು ಬ್ಯಾಟಿಂಗ್​ಗೆ ಕಳುಹಿಸಿ ಅಲ್ಪಮೊತ್ತಕ್ಕೆ ಕಟ್ಟಿಹಾಕುವುದು ಆರ್​ಆರ್​ ನಾಯಕ ಸಂಜು ಸ್ಯಾಮ್ಸನ್​ ತಂತ್ರವಾಗಿದೆ.

ತಂಡಗಳು ಇಂತಿವೆ; ರಾಯಲ್ ಚಾಲೆಂಜರ್ಸ್ ಬೆಂಗಳೂರು -ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮೊರೊರ್, ಕರಣ್​ ಶರ್ಮಾ, ಯಶ್ ದಯಾಳ್, ಮೊಹಮ್ಮದ್ ಸಿರಾಜ್, ಲೂಕಿ ಫರ್ಗುಸನ್.

ರಾಜಸ್ಥಾನ್ ರಾಯಲ್ಸ್:ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್ ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋಚ್​ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯಜುವೇಂದ್ರ ಚಹಲ್.

ಇದನ್ನೂ ಓದಿ:ಆರ್​ಸಿಬಿ ತಂಡ ಅಭ್ಯಾಸ ರದ್ದು ಮಾಡಲು ಕಾರಣ ಇದು: ಗುಜರಾತ್​ ಕ್ರಿಕೆಟ್​ ಸಂಸ್ಥೆಯ ಹೇಳಿದ್ದೇನು? - RCB cancelling practice session

Last Updated : May 22, 2024, 9:29 PM IST

ABOUT THE AUTHOR

...view details