ಪ್ಯಾರಿಸ್ (ಫ್ರಾನ್ಸ್):ಭಾರತದ ಸ್ಟಾರ್ ಷಟ್ಲರ್ ಪಿ.ವಿ.ಸಿಂಧು ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನ ಅಂತ್ಯಗೊಂಡಿದೆ. ಹ್ಯಾಟ್ರಿಕ್ ಪದಕದ ಭರವಸೆ ಮೂಡಿಸಿದ್ದ ಸಿಂಧು ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ 9ನೇ ಶ್ರೇಯಾಂಕಿತೆ, ಚೀನಾದ ಆಟಗಾರ್ತಿ ಹೀ ಬಿಂಗ್‌ಜಿಯಾವೊ ವಿರುದ್ಧ ನೇರ ಸೆಟ್ಗಳಿಂದ ಸೋಲು ಕಂಡು ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.
ಹೈದರಾಬಾದ್‌ನ 29 ವರ್ಷದ ಸಿಂಧು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಒಲಿಂಪಿಕ್ಸ್‌ನಲ್ಲಿ ಸತತ ಮೂರನೇ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ, ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ಮೂರನೇ ಪದಕ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ.
16ನೇ ಸುತ್ತಿನ 56 ನಿಮಿಷಗಳ ಹಣಾಹಣಿಯಲ್ಲಿ ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ 19-21, 14-21 ಅಂತರದಲ್ಲಿ ಸಿಂಧು ಪರಾಭವಗೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚೀನಾದ ಇದೇ ಷಟ್ಲರ್ ಬಿಂಗ್‌ಜಿಯಾವೊ ವಿರುದ್ಧ ಗೆದ್ದು ಕಂಚಿನ ಪದಕಕ್ಕೆ ಸಿಂಧು ಮುತ್ತಿಕ್ಕಿದ್ದರು. ಬಳಿಕ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಬಿಂಗ್‌ಜಿಯಾವೊ ಸಿಂಧು ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದರು. ಈಗ ಒಲಿಂಪಿಕ್ಸ್‌ನಲ್ಲಿ ಸಿಂಧು ವಿರುದ್ಧ ಮತ್ತೆ ಚೀನಾದ ಷಟ್ಲರ್ ಸೇಡು ತೀರಿಸಿಕೊಂಡಿದ್ದಾರೆ.