ನವದೆಹಲಿ:ಭಾರತದ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಮತ್ತು ಚಿಲಿಯ ಮಹಿಳಾ ಹಾಕಿ ತಂಡದ ನಾಯಕಿ ಕ್ಯಾಮಿಲ್ ಕ್ಯಾರಮ್ ಅವರನ್ನು ಎಫ್‌ಐಎಚ್ ಅಥ್ಲೀಟ್‌ಗಳ ಸಮಿತಿಯ ಸಹ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಕ್ಯಾಮಿಲಾ ಕ್ಯಾರಮ್ ಅವರನ್ನು ಕಾರ್ಯಕಾರಿ ಮಂಡಳಿಯಲ್ಲಿ ಸಹ - ಅಧ್ಯಕ್ಷೆ ಮತ್ತು ಅಥ್ಲೀಟ್‌ಗಳ ಸಮಿತಿಯ ಪ್ರತಿನಿಧಿಯಾಗಿ ನಿಯೋಜಿಸಿದ್ದರೆ, ಭಾರತೀಯ ಪುರುಷರ ಹಾಕಿ ತಂಡದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಸಹ - ಅಧ್ಯಕ್ಷರಾಗಿದ್ದಾರೆ ಮತ್ತು ಅವರು ಕ್ಯಾರಮ್ ಅವರೊಂದಿಗೆ ಯೋಜನೆ ಮತ್ತು ಸಭೆಗಳನ್ನು ಮುನ್ನಡೆಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಮಾಧ್ಯಮಗಳಿಗೆ ತಿಳಿಸಿದೆ.
FIH ಅಥ್ಲೀಟ್‌ಗಳ ಸಮಿತಿಯು ಸಲಹಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ ಎಫ್‌ಐಎಚ್ ಕಾರ್ಯಕಾರಿ ಮಂಡಳಿ, ಎಫ್‌ಐಎಚ್ ಸಮಿತಿಗಳು, ಸಲಹಾ ಸಮಿತಿಗಳು ಸೇರಿದಂತೆ ಇತರ ಸಂಸ್ಥೆಗಳಿಗೆ ಸಲಹೆಗಳನ್ನು ನೀಡುತ್ತದೆ. ಜತೆಗೆ ಅಥ್ಲೀಟ್‌ಗಳ ಆರೋಗ್ಯ ಮತ್ತು ಕಲ್ಯಾಣದ ಬಗ್ಗೆ ಕಾಳಜಿ ವಹಿಸುವುದು, ಡೋಪಿಂಗ್ ನಿಂದ ದೂರ ಇರುವಂತೆ ನಿಗಾವಹಿಸುವುದು, ಸೋಷಿಯಲ್ ಮೀಡಿಯಾ, ಹಾಕಿಗೆ ಹೆಚ್ಚಿನ ಅಭಿಮಾನಿಗಳನ್ನು ಆಕರ್ಷಿಸಲು, ಹಾಕಿ ಆಟವನ್ನು ಅಭಿವೃದ್ಧಿಪಡಿಸಲು ಮತ್ತು ಇತರ ಕ್ರೀಡಾ ಸಂಸ್ಥೆಗಳ ಕ್ರೀಡಾಪಟುಗಳ ಆಯೋಗದೊಂದಿಗೆ ಸಂಪರ್ಕ ಸಾಧಿಸುವಲ್ಲಿ ಸಮಿತಿಯು ಪ್ರಮುಖ ಪಾತ್ರ ವಹಿಸುತ್ತದೆ.
ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ಪಿ.ಆರ್ ಶ್ರೀಜೇಶ್ ಅವರನ್ನು ಅಭಿನಂದಿಸಿದ್ದಾರೆ," ಶ್ರೀಜೇಶ್ ಅವರಿಗೆ ಎಫ್‌ಐಎಚ್‌ನ ಸಹ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಸಂತೋಷದ ವಿಚಾರವಾಗಿದೆ. ಹಾಕಿಯಲ್ಲಿ ಅಪಾರ ಅನುಭವ ಹೊಂದಿರುವ ಶ್ರೀಜೇಶ್ ತಮ್ಮ ಸಹ ಆಟಗಾರರ ಶ್ರೇಯೋಭಿವೃದ್ಧಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಬಹುದಾಗಿದೆ. ಅಲ್ಲದೆ ಕ್ರೀಡಾಪಟುಗಳ ಸುಧಾರಣೆಗಾಗಿ ಬಹಳಷ್ಟು ಸಹಾಯಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.