ಚಂಡೀಗಢ (ಪಂಜಾಬ್) :ಮಂಗಳವಾರ ಇಲ್ಲಿನ ಮಹಾರಾಜ ಯದ್ವಿಂದರ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 2 ರನ್‌ಗಳಿಂದ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಯುವ ಆಟಗಾರ ನಿತೀಶ್ ರೆಡ್ಡಿ ಆಲ್‌ರೌಂಡ್ ಪ್ರದರ್ಶನಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
20 ವರ್ಷದ ನಿತೀಶ್ ರೆಡ್ಡಿ 37 ಎಸೆತಗಳಲ್ಲಿ 64 ರನ್ ಗಳಿಸಿ ಎಸ್ಆರ್ಹೆಚ್ ತಂಡವು ಉತ್ತಮ ಮೊತ್ತ ಕಲೆ ಹಾಕುವಲ್ಲಿ ಅಮೂಲ್ಯ ಕಾಣಿಕೆ ನೀಡಿದ್ದರು. ಅಲ್ಲದೇ, ಮೂರು ಓವರ್ ಬೌಲಿಂಗ್ನಲ್ಲಿ ಒಂದು ವಿಕೆಟ್ ಕೂಡ ಪಡೆದಿದ್ದರು. ಹೈದರಾಬಾದ್ ತಂಡ 9 ವಿಕೆಟ್‌ಗೆ 182 ರನ್ ಗಳಿಸಿತ್ತು. ಬಳಿಕ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದ ಪಂಜಾಬ್ ಗೆಲುವಿನ ಅಂಚಿನಲ್ಲಿ ಎಡವಿತ್ತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಪ್ಯಾಟ್ ಕಮಿನ್ಸ್ "ನಿತೀಶ್ ರೆಡ್ಡಿ ಅಗ್ರ ಕ್ರಮಾಂಕದಲ್ಲಿ ಭರ್ಜರಿ ಆಟ ತೋರಿದರು. ಫೀಲ್ಡಿಂಗ್ನಲ್ಲಿಯೂ ಉತ್ತಮವಾಗಿದ್ದಲ್ಲದೇ, ಮೂರು ಓವರ್ ಬೌಲಿಂಗ್ ಕೂಡ ಮಾಡಿದರು. ಅವರ ಬ್ಯಾಟಿಂಗ್ನಿಂದಾಗಿ ನಾವು 180 ರನ್ ಗಳಿಸಲು ಸಾಧ್ಯವಾಯಿತು" ಎಂದು ಪಂದ್ಯಶ್ರೇಷ್ಠರಾದ ಆಲ್‌ರೌಂಡರ್ ರೆಡ್ಡಿ ಆಟವನ್ನು ಅವರು ಕೊಂಡಾಡಿದರು.
ಕ್ರಿಕೆಟ್‌ನ ಶ್ರೇಷ್ಠ ಪಂದ್ಯಗಳಲ್ಲೊಂದು ಎಂದ ಕಮ್ಮಿನ್ಸ್, ತಂಡವು ಸಕಾರಾತ್ಮಕ ಆಟ ತೋರಿತು ಎಂದರು. "ಆರಂಭದಲ್ಲಿ ಪಂಜಾಬ್ನವರು ಚೆನ್ನಾಗಿ ಬೌಲಿಂಗ್ ಮಾಡಿದರು. ನಾವು 182 ರನ್ ಗಳಿಸಿದ್ದಲ್ಲದೇ, ಬಳಿಕ ಅದನ್ನು ಡಿಫೆಂಡ್ ಮಾಡುವಲ್ಲಿ ಯಶಸ್ವಿಯಾದೆವು. ಇಂಫ್ಯಾಕ್ಸ್ ಪ್ಲೇಯರ್ ಅವಕಾಶ ಇರುವುದರಿಂದ ಇನ್ನಷ್ಟು ಆಳವಾಗ ಬ್ಯಾಟಿಂಗ್ ಕ್ರಮಾಂಕ ಹೊಂದಬಹುದಾಗಿದೆ. ಪಂದ್ಯ ಗೆಲ್ಲಲು ನಾವು ಧನಾತ್ಮಕವಾಗಿರಲು ಪ್ರಯತ್ನಿಸುತ್ತೇವೆ'' ಎಂದು ಕಮ್ಮಿನ್ಸ್ ಹೇಳಿದರು.
''ಕೇವಲ 150-160 ಗಳಿಸಿದರೆ ಹತ್ತರಲ್ಲಿ ಒಂಬತ್ತು ಪಂದ್ಯಗಳನ್ನು ಸೋಲಬೇಕಾಗುತ್ತದೆ. ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವುದು ಪ್ರಮುಖ ಸಮಯ ಎಂದು ನಮಗೆ ತಿಳಿದಿತ್ತು. ಸ್ಕೋರ್ ಬಗ್ಗೆ ಬಹಳ ಸಂತಸವಿದೆ. ಪಂಜಾಬ್ನವರು ಆರಂಭದಲ್ಲಿ ಬೌಲಿಂಗ್ ಮಾಡಿದ್ದನ್ನು ನೋಡಿದ್ದೆವು. ಹಾಗಾಗಿ, ನಾನು ಮತ್ತು ಭುವಿ ಬೌಲಿಂಗ್ ಆರಂಭಿಸಿ, ಒಂದು ಅಥವಾ 2 ವಿಕೆಟ್ ಗಳಿಸಬೇಕು ಎಂದು ಯೋಚಿಸಿದ್ದೆ. ಸಾಕಷ್ಟು ಎಡಗೈ ಹಾಗೂ ಬಲಗೈ ಆಟಗಾರರನ್ನು ಹೊಂದಿದ್ದೇವೆ. ಆದ್ದರಿಂದ ಬೌಲರ್‌ಗಳು ಯಶಸ್ಸು ಸಾಧಿಸಲು ಉತ್ತಮ ಅವಕಾಶ ನೀಡಲು ಪ್ರಯತ್ನಿಸುತ್ತಿದ್ದೇವೆ" ಎಂದರು.