PAK vs NZ :ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಇಂದಿನಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ.
ಉಭಯ ತಂಡಗಳ ನಡುವಿನ ಈ ಪಂದ್ಯ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಪಂದ್ಯ ಆರಂಭಕ್ಕೂ ಮೊದಲೇ ಪಾಕಿಸ್ತಾನಕ್ಕೆ ಆತಂಕ ಹೆಚ್ಚಾಗಿದೆ.
ಹೌದು, ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಏಕದಿನ ಪಂದ್ಯದಲ್ಲಿ ಅತ್ಯಂತ ಕೆಟ್ಟದಾಖಲೆ ಹೊಂದಿದೆ. ಅಲ್ಲದೆ ಇತ್ತೀಚೆಗೆ ಪಾಕ್ನಲ್ಲೇ ನಡೆದಿದ್ದ ತ್ರಿಕೋನ ಸರಣಿಯ ಪಂದ್ಯದಲ್ಲಿ ಪಾಕ್ ಮತ್ತು ಕಿವೀಸ್ ಎರಡು ಬಾರಿ ಮುಖಾಮುಖಿಯಾಗಿದ್ದವು. ಆದರೆ ಆ ಎರಡೂ ಪಂದ್ಯಗಳಲ್ಲಿ ಪಾಕ್ ಹೀನಾಯ ಸೋಲನುಭವಿಸಿತ್ತು. ಇದೀಗ ತಂಡದ ಆತಂಕಕ್ಕೂ ಕಾರಣವಾಗಿದೆ.
ಒಂದು ವೇಳೆ ಈ ಪಂದ್ಯದಲ್ಲಿ ಪಾಕ್ ಸೋತರೆ, ಟೂರ್ನಿಯಿಂದ ಹೊರಬೀಳುವ ಅಪಾಯ ಹೆಚ್ಚಿರಲಿದೆ. ವಾಸ್ತವವಾಗಿ, ಈ ಪಂದ್ಯಾವಳಿಯಲ್ಲಿ ಕೇವಲ 8 ತಂಡಗಳಿವೆ. ಪ್ರತಿ ತಂಡಗಳು ಕೇವಲ ಮೂರು ಪಂದ್ಯಗಳನ್ನು ಆಡಲಿವೆ.
ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಮೊದಲ ಪಂದ್ಯವನ್ನು ಸೋತರೆ, ಉಳಿದ ಎರಡು ಪಂದ್ಯಗಳು ತಂಡಕ್ಕೆ ಮಾಡು ಇಲ್ಲವೇ ಮಡಿ ಅನ್ನೋ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ವಾಸ್ತವವಾಗಿ, ಯಾವುದೇ ತಂಡವು ಸೆಮಿಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲು 3 ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಹೆಡ್ ಟು ಹೆಡ್ ದಾಖಲೆ :ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಾಲ್ಕನೇ ಬಾರಿಗೆ ಮುಖಾಮುಖಿ ಆಗುತ್ತಿವೆ. ಇದಕ್ಕೂ ಮುನ್ನ ಉಭಯ ತಂಡಗಳು 2000, 2006 ಮತ್ತು 2009ರ ಚಾಂಪಿಯನ್ಸ್ ಟ್ರೋಫಿಗಳಲ್ಲಿ ಮುಖಾಮುಖಿ ಆಗಿದ್ದವು. ಆದರೆ, ಮೂರು ಬಾರಿ ಕಿವೀಸ್ ವಿರುದ್ಧ ಸೋಲನ್ನು ಕಂಡಿದೆ. ಈ ಹಿನ್ನೆಲೆ ಈ ಪಂದ್ಯವೂ ಪಾಕ್ ಸುಲಭವಾಗಿಲ್ಲ.
ಉಳಿದಂತೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಏಕದಿನ ಪಂದ್ಯಗಳಲ್ಲಿ 118 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಒಟ್ಟು 61 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ 53 ಪಂದ್ಯಗಳನ್ನು ಗೆದ್ದುಕೊಂಡಿದೆ. 3 ಪಂದ್ಯಗಳು ರದ್ದಾಗಿದ್ದು ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ.
ಪಂದ್ಯ ಪ್ರಾರಂಭ :2:30ಕ್ಕೆ ಪ್ರಾರಂಭ
ಸಂಭಾವ್ಯ ತಂಡಗಳು - ಪಾಕಿಸ್ತಾನ :ಫಖರ್ ಜಮಾನ್, ಬಾಬರ್ ಆಜಮ್, ಕಮ್ರಾನ್ ಗುಲಾಮ್/ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಘಾ, ತಯ್ಯಬ್ ತಾಹಿರ್, ಖುಷ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್
ನ್ಯೂಜಿಲೆಂಡ್ :ವಿಲ್ ಯಂಗ್/ರಚಿನ್ ರವೀಂದ್ರ, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ನಾಥನ್ ಸ್ಮಿತ್/ಜಾಕೋಬ್ ಡಫಿ, ವಿಲ್ ಒ'ರೂರ್ಕ್
ಇದನ್ನೂ ಓದಿ:ಇಂದಿನಿಂದ ಚಾಂಪಿಯನ್ಸ್ ಟ್ರೋಫಿ ಪ್ರಾರಂಭ: ಪಂದ್ಯಗಳು ಉಚಿತವಾಗಿ ವೀಕ್ಷಿಸಬಹುದೆ?