ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಬಾಂಗ್ಲಾ ಐತಿಹಾಸಿಕ ಗೆಲುವು ಸಾಧಿಸಿದೆ. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಾಂಗ್ಲಾ 10 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾದ ಮೊದಲ ಗೆಲುವು ಇದಾಗಿದೆ. ತವರಿನಲ್ಲಿ ಬಾಂಗ್ಲಾ ವಿರುದ್ಧದ ಹೀನಾಯ ಸೋಲಿನ ನಂತರ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಪಾಯಿಂಟ್ ಪಟ್ಟಿಯಲ್ಲೂ ಹಿನ್ನಡೆ ಅನುಭವಿಸಿದೆ.
ಬಾಂಗ್ಲಾ ಮತ್ತು ಪಾಕ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಬಳಿಕ ನವೀಕರಣಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ ) ಪಾಯಿಂಟ್ ಪಟ್ಟಿಯಲ್ಲಿ ಪಾಕಿಸ್ತಾನ ಎಂಟನೇ ಸ್ಥಾನಕ್ಕೆ ಕುಸಿದಿದೆ. ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿರುವ ಪಾಕ್ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ 22 ಅಂಕಗಳನ್ನು ಹೊಂದಿದೆ. ಪಾಕಿಸ್ತಾನದ ಅಂಕಗಳ ಶೇಕಡಾವಾರು 30.56 ಆಗಿದೆ. ಮತ್ತೊಂದೆಡೆ, ಭರ್ಜರಿ ಗೆಲುವಿನೊಂದಿಗೆ ಬಾಂಗ್ಲಾ ಆರನೇ ಸ್ಥಾನಕ್ಕೇರಿದೆ. ಬಾಂಗ್ಲಾದೇಶ ಇದುವರೆಗೆ 5 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 2ರಲ್ಲಿ ಗೆಲುವು ಸಾಧಿಸಿ 24 ಅಂಕಗಳನ್ನು ಪಡೆದುಕೊಂಡಿದೆ. ಮತ್ತು ಅಂಕಗಳ ಶೇಕಡಾವಾರು ಅಂಕ 40 ಆಗಿದೆ.