ಹೈದರಾಬಾದ್:ಜುಲೈ 26 ರಿಂದ ಆರಂಭವಾಗಲಿರುವ ವರ್ಣರಂಜಿತ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಇನ್ನೂ ನಾಲ್ಕೇ ದಿನಗಳು ಬಾಕಿ ಇವೆ. ಭಾರತದಿಂದ 117 ಸ್ಪರ್ಧಿಗಳು ವಿಶ್ವದ ದೊಡ್ಡ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಈ ಸಲ ಪದಕಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಕ್ರೀಡಾಕೂಟಕ್ಕೆ ದಿನಗಣನೆಯ ಸಂಭ್ರಮ ಶುರುವಾದ ಹೊತ್ತಲ್ಲೇ, ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದು ಎದುರಾಗಿದೆ.
ಪದಕ ನಿರೀಕ್ಷೆ ಇರುವ ಕ್ರೀಡೆಗಳಲ್ಲಿ ಶೂಟಿಂಗ್, ಟೆನ್ನಿಸ್, ಕುಸ್ತಿ ಸೇರಿದಂತೆ ಹಲವು ಕ್ರೀಡೆಗಳ ಜೊತೆಗೆ ಹಾಕಿ ಕೂಡ ಒಂದಾಗಿದೆ. ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದಿದ್ದ ತಂಡ ಈ ಬಾರಿ, ಚಿನ್ನದ ಸಾಧನೆ ಮಾಡುವ ಮಹದಾಸೆ ಹೊಂದಿದೆ. ಇಂತಿಪ್ಪ, ತಂಡದ ಭದ್ರಗೋಡೆ, ಅನುಭವಿ ಗೋಲ್ಕೀಪರ್, ಮಾಜಿ ನಾಯಕ ಪಿಆರ್ ಶ್ರೀಜೇಶ್ ದೊಡ್ಡ ಶಾಕ್ ನೀಡಿದ್ದಾರೆ. ಒಲಿಂಪಿಕ್ ಬಳಿಕ ಅವರು ಕ್ರೀಡೆಯಿಂದ ನಿವೃತ್ತಿ ಹೊಂದುವುದಾಗಿ ಸೋಮವಾರ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಘೋಷಣೆ:ಈ ಬಗ್ಗೆ ಎಕ್ಸ್, ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿರುವ ಕೇರಳದ ಹಾಕಿ ಸ್ಟಾರ್ ಶ್ರೀಜೇಶ್, "ನಾನು ಅಂತಾರಾಷ್ಟ್ರೀಯ ಹಾಕಿಯಿಂದ ಹಿಂದೆ ಸರಿಯುವ ಹೊತ್ತಾಗಿದೆ. ನಾನು ಕ್ರೀಡೆ ಮತ್ತು ಬದುಕಿನ ಬಗ್ಗೆ ಹೆಮ್ಮೆ ಪಡುತ್ತೇನೆ. ಇಲ್ಲಿಯವರೆಗೂ ನನ್ನ ಪ್ರಯಾಣ ಉತ್ತಮವಾಗಿದೆ. ವೃತ್ತಿಜೀವನದ ಬಗ್ಗೆಯೂ ಹೆಮ್ಮೆ ಇದೆ. ಕ್ರೀಡೆ ಹೊರತಾಗಿ ಮುಂದಿನ ಜೀವನಕ್ಕೆ ಹೊರಳಬೇಕಿದೆ. ನನ್ನ ವೃತ್ತಿಜೀವನದಲ್ಲಿ ಬೆಂಬಲವಾಗಿ ನಿಂತ ನನ್ನ ಕುಟುಂಬ, ತಂಡದ ಸಹ ಆಟಗಾರರು, ಅಭಿಮಾನಿಗಳು, ಹಾಕಿ ಇಂಡಿಯಾದ ಪ್ರೀತಿಗೆ ನಾನು ಚಿರಋಣಿಯಾಗಿರುತ್ತೇನೆ. ನನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ಧನ್ಯವಾದಗಳು. ಪ್ಯಾರಿಸ್ನಲ್ಲಿ ಪದಕದ ಬಣ್ಣವನ್ನು ಬದಲಿಸಲು ಶತಪ್ರಯತ್ನ ಮಾಡುವುದಾಗಿ" ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವೃತ್ತಿಜೀವನದ ಬಗ್ಗೆ ವಿವರವಾಗಿ ಬರೆದುಕೊಂಡಿರುವ ಶ್ರೀಜೇಶ್, ಜಿ. ವಿ. ರಾಜಾ ಸ್ಪೋರ್ಟ್ಸ್ ಸ್ಕೂಲ್‌ನಲ್ಲಿನ ವೃತ್ತಿಜೀವನದ ಆರಂಭದಿಂದ ಹಿಡಿದು ಇಲ್ಲಿಯವರೆಗಿನ ಪಯಣಕ್ಕೆ ಪ್ರತಿ ಹೆಜ್ಜೆ, ಕನಸು, ಆಶಯಗಳಿಗೆ ನನ್ನ ಪ್ರೀತಿಪಾತ್ರರು ಬೆಂಬಲವಾಗಿ ನಿಂತಿದ್ದಾರೆ.