Noman ali: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ 38 ವರ್ಷದ ಪಾಕಿಸ್ತಾನದ ಬೌಲರ್ 6 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.
ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಮುಲ್ತಾನ್ ಮೈದಾನದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಪಾಕ್ ಶನಿವಾರ (ಇಂದು) ಕೆರೆಬಿಯನ್ನರ ಜೊತೆ ಎರಡನೇ ಪಂದ್ಯವನ್ನು ಆಡುತ್ತಿದೆ.
ಪಂದ್ಯದ ಮೊದಲ ದಿನವಾದ ಇಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ವೆಸ್ಟ್ ಇಂಡೀಸ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಕೇವಲ 164 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮುಗಿಸಿತು. ತಂಡದ ಪರ ಗುಡಕೇಶ್ ಮೋಟಿ (55), ಹೋಡ್ಜ್ (21), ರೋಚ್ (25), ವಾರ್ರಿಕ್ಯಾನ್ (36) ಹೊರತು ಪಡಿಸಿ ಯಾವೊಬ್ಬ ಬ್ಯಾಟರ್ಗೂ ಕನಿಷ್ಠ ಎರಡಂಕಿ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಪಾಕ್ ಬೌಲರ್ ನೊಮನ್ ಹ್ಯಾಟ್ರಿಕ್ನೊಂದಿಗೆ 6 ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೈನ್ ಅಪ್ ನಾಶಪಡಿಸಿದರು. ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆಯನ್ನು ಬರೆದರು.
38 ವರ್ಷದ ನೋಮನ್ ಒಟ್ಟು 15.1 ಓವರ್ ಬೌಲ್ ಮಾಡಿ 41 ರನ್ ನೀಡಿದರು. ಅದರಲ್ಲೂ 12ನೇ ಓವರ್ನಲ್ಲಿ ಬೌಲ್ ಮಾಡಿದ ಅವರು ಮೊದಲ ಎಸೆತದಲ್ಲಿ ಜಸ್ಟಿನ್ ಗ್ರೀವ್ಸ್ (1), ಎರಡನೇ ಎಸೆತದಲ್ಲಿ ಟೆವಿನ್ ಇಮ್ಲಾಚ್ (0) ಮತ್ತು ಮೂರನೇ ಎಸೆತದಲ್ಲಿ ಕೆವಿನ್ ಸಿಂಕ್ಲೇರ್ (0) ಅವರನ್ನು ಔಟ್ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಸುದೀರ್ಘ ಸ್ವರೂಪದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಪಾಕಿಸ್ತಾನದ ಮೊದಲ ಸ್ಪಿನ್ನರ್ ಮತ್ತು ಒಟ್ಟಾರೆ 6ನೇ ಬೌಲರ್ ಎನಿಸಿಕೊಂಡರು.
ಇದಕ್ಕೂ ಮುನ್ನ ವಾಸಿಂ ಅಕ್ರಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಪಾಕಿಸ್ತಾನದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇವರು 1999ರಲ್ಲಿ ಶ್ರೀಲಂಕಾ ವಿರುದ್ಧ ಲಾಹೋರ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ನಂತರ ಅಬ್ದುಲ್ ರಜಾಕ್, ಮೊಹಮ್ಮದ್ ಸಮಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಇದೀಗಾ ನೋಮನ್ ಅಲಿ ಈ ವಿಶೇಷ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಪಾಕಿಸ್ತಾನ 1952ರಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ಪ್ರಾರಂಭಿಸಿದ್ದು, 73 ವರ್ಷ ಕಳೆದರೂ ಪಾಕ್ನ ಯಾವೊಬ್ಬ ಸ್ಪಿನ್ನರ್ಗೂ ಹ್ಯಾಟ್ರಿಕ್ ಸಾಧನೆ ಮಾಡಲು ಈ ವರೆಗೂ ಸಾಧ್ಯವಾಗಿರಲಿಲ್ಲ.
ಅಲಿ ಬೌಲಿಂಗ್ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ಕೇವಲ 37ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಕೊನೆಯಲ್ಲಿ ಕೆಮರ್ ರೋಚ್ (25) ಗುಡಾಕೇಶ್ ಮೋತಿ (55) ಮತ್ತು ಜೋಮೆಲ್ ವಾರಿಕಾನ್ ( 35) ಅವರ ಅಮೋಘ ಪ್ರದರ್ಶನದಿಂದ ವೆಸ್ಟ್ ಇಂಡೀಸ್ 41 ಓವರ್‌ಗಳಲ್ಲಿ 163 ರನ್ ಕಲೆಹಾಕುವಲ್ಲಿ ಯಶಸ್ವಿ ಆಯ್ತು.