ದುಬೈ:ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತದ ವನಿತೆಯರು ಸೋಲಿನ ಆಘಾತ ಎದುರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಹಣಾಹಣಿಯಲ್ಲಿ ಟೀಂ ಇಂಡಿಯಾ 58 ರನ್ಗಳ ಸೋಲು ಅನುಭವಿಸಿದೆ. ಇದರೊಂದಿಗೆ ಎ ಗುಂಪಿನಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆಯ ನಿವ್ವಳ ರನ್ ರೇಟ್ ಮೇಲೆ ಕೂಡ ಭಾರಿ ಪರಿಣಾಮ ಬೀರಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕಿ ಸೋಫಿಯಾ ಡಿವೈನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಾಯಕಿಯ ನಿರ್ಧಾರಕ್ಕೆ ತಕ್ಕಂತೆ ಕಿವೀಸ್ ತಂಡ, ಉತ್ತಮ ಆರಂಭ ಪಡೆಯಿತು. ಸುಜಿ ಬೇಟ್ಸ್ (27) ಹಾಗೂ ಜಾರ್ಜಿಯಾ ಪ್ಲಿಮ್ಮರ್ (34) ಮೊದಲ ವಿಕೆಟ್ಗೆ 67 ರನ್ ಸೇರಿಸಿ ಭರ್ಜರಿ ಬುನಾದಿ ಹಾಕಿಕೊಟ್ಟರು.
ಇವರಿಬ್ಬರ ವಿಕೆಟ್ ಪತನದ ಬಳಿಕ ಕ್ಯಾಪ್ಟನ್ ಡಿವೈನ್ ಮಿಂಚಿನ ಅರ್ಧಶತಕ ದಾಖಲಿಸಿ ತಂಡಕ್ಕೆ ಆಸರೆಯಾದರು. ಕೇವಲ 36 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 57 ರನ್ ಸಿಡಿಸಿದರು. ಡಿವೈನ್ಗೆ ಅಮೆಲಿಯಾ ಕೆರ್ (13) ಹಾಗೂ ಬ್ರೂಕ್ ಹ್ಯಾಲಿಡೇ (16) ಉತ್ತಮ ಸಾಥ್ ನೀಡಿದರು. ಇದರೊಂದಿಗೆ ಕಿವೀಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 160 ರನ್ ಕಲೆ ಹಾಕಿತು.
ಭಾರತದ ಬ್ಯಾಟಿಂಗ್ ವೈಫಲ್ಯ: ಬೌಲಿಂಗ್ನಲ್ಲಿ ಸಾಧಾರಣ ಪ್ರದರ್ಶನ ತೋರಿದ ಭಾರತ ತಂಡ, ಬ್ಯಾಟಿಂಗ್ನಲ್ಲೂ ಕೂಡ ವೈಫಲ್ಯ ಕಂಡಿತು. 161 ರನ್ ಗುರಿ ಬೆನ್ನಟ್ಟಿದ ವನಿತೆಯರು ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಸಾಗಿದರು. ಶಫಾಲಿ ವರ್ಮಾ 2 ರನ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಸ್ಮೃತಿ ಮಂಧಾನ (12) ಕೂಡ ಪೆವಿಲಿಯನ್ ಸೇರಿಕೊಂಡರು.