ಬ್ರಿಡ್ಜ್‌ಟೌನ್(ಬಾರ್ಬಡೋಸ್):ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿ ಹೊತ್ತಿಗೆ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೋಮವಾರ ತಿಳಿಸಿದ್ದಾರೆ.
ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ದ್ರಾವಿಡ್ ನಂತರ ಭಾರತದ ಮುಖ್ಯ ಕೋಚ್ ಸ್ಥಾನ ತುಂಬುವ ನಿರೀಕ್ಷೆಯಿದೆ. ಕ್ರಿಕೆಟ್ ಸಲಹಾ ಸಮಿತಿಯು ಮುಖ್ಯ ಕೋಚ್ ಹುದ್ದೆಗೆ ಸಂದರ್ಶನ ನಡೆಸಿ ಗಂಭೀರ್ ಮತ್ತು ಭಾರತ ಮಹಿಳಾ ತಂಡದ ಮಾಜಿ ಕೋಚ್ ಡಬ್ಲ್ಯೂ.ವಿ.ರಾಮನ್ ಅವರನ್ನು ಶಾರ್ಟ್ ಲಿಸ್ಟ್ ಮಾಡಿದೆ.
ಕೋಚ್ ಮತ್ತು ಆಯ್ಕೆದಾರ ಇಬ್ಬರನ್ನೂ ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದು ಶನಿವಾರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಭಾರತ ತಂಡದೊಂದಿಗೆ ಕೆರಿಬಿಯನ್ ನಲ್ಲಿರುವ ಜಯ್ ಶಾ ಹೇಳಿದ್ದರು. ಸಿಎಸಿ ಇಬ್ಬರನ್ನು ಸಂದರ್ಶಿಸಿ, ಶಾರ್ಟ್ ಲಿಸ್ಟ್ ಮಾಡಿದೆ ಮತ್ತು ಮುಂಬೈ ತಲುಪಿದ ನಂತರ ಅವರು ಏನು ನಿರ್ಧರಿಸುತ್ತಾರೋ ಅದನ್ನು ನಾವು ಅನುಸರಿಸುತ್ತೇವೆ. ವಿವಿಎಸ್ ಲಕ್ಷ್ಮಣ್ ಜಿಂಬಾಬ್ವೆಗೆ ಹೋಗುತ್ತಿದ್ದಾರೆ, ಆದರೆ ಹೊಸ ಕೋಚ್ ಶ್ರೀಲಂಕಾ ಸರಣಿಯಿಂದ ಸೇರಲಿದ್ದಾರೆ ಎಂದು ಜುಲೈ 6 ರಿಂದ ಪ್ರಾರಂಭವಾಗುವ ಜಿಂಬಾಬ್ವೆ ಪ್ರವಾಸವನ್ನು ಉಲ್ಲೇಖಿಸಿ ಶಾ ತಿಳಿಸಿದ್ದರು.
ಜುಲೈ 27ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ.
ನಾಯಕನನ್ನು ಆಯ್ಕೆದಾರರು ನಿರ್ಧರಿಸುತ್ತಾರೆ:ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಪ್ರದರ್ಶನ ಮತ್ತು ರೋಹಿತ್‌ನಿಂದ ಅವರು ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಗಳ ಕುರಿತು ಪ್ರತಿಕ್ರಿಯಿಸಿ, ಟೀಂ ಇಂಡಿಯಾದ ನಾಯಕನನ್ನು ಆಯ್ಕೆದಾರರು ನಿರ್ಧರಿಸುತ್ತಾರೆ ಮತ್ತು ನಾವು ಅವರೊಂದಿಗೆ ಚರ್ಚಿಸಿದ ನಂತರ ಘೋಷಿಸುತ್ತೇವೆ. ನೀವು ಹಾರ್ದಿಕ್ ಬಗ್ಗೆ ಕೇಳಿದ್ದೀರಿ, ಅವರ ಫಾರ್ಮ್ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಆದರೆ ನಾವು ಮತ್ತು ಆಯ್ಕೆದಾರರು ಅವರ ಮೇಲೆ ನಂಬಿಕೆಯನ್ನು ಇರಿಸಿದ್ದೇವೆ. ಅವರು ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ ಎಂದರು.
ಐದು ಟೆಸ್ಟ್‌ಗಳಿಗೆ ಮುಂಚಿತವಾಗಿ, ಭಾರತ ಎ ತಂಡವು ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಸದ್ಯ ಚಾಂಪಿಯನ್ ತಂಡ ಭಾರತವನ್ನು ತಲುಪಿದ ನಂತರ ಬಿಸಿಸಿಐ ಅಭಿನಂದನಾ ಸಮಾರಂಭವನ್ನು ಯೋಜಿಸುತ್ತಿದೆ. ಆದರೆ, ಚಂಡಮಾರುತದ ಕಾರಣ ಬಾರ್ಬಡೋಸ್‌ನ ವಿಮಾನ ನಿಲ್ದಾಣವನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ. ಹೀಗಾಗಿ ಟೀಂ ಇಂಡಿಯಾ ಇಲ್ಲಿ ಸಿಕ್ಕಿಹಾಕಿಕೊಂಡಿದೆ, ಜೊತೆಗೆ ನಾವೂ ಇಲ್ಲಿ ಸಿಲುಕಿಕೊಂಡಿದ್ದೇವೆ. ಪ್ರಯಾಣ ನಿಗದಿಯಾದ ನಂತರ ನಾವು ಅಭಿನಂದನೆಯ ಬಗ್ಗೆ ಯೋಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಇನ್ಸ್ಟಾಗ್ರಾಮ್ನಲ್ಲಿ ದಾಖಲೆ ಸೃಷ್ಟಿಸಿದ ವಿರಾಟ್ ಕೊಹ್ಲಿಯ ಒಂದೇ ಒಂದು ಪೋಸ್ಟ್: ಬಾಲಿವುಡ್ ಜೋಡಿಯ ದಾಖಲೆ ಉಡೀಸ್! - Virat Kohli Instagram post