ಮುಂಬೈ (ಮಹಾರಾಷ್ಟ್ರ): ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಭಾರತೀಯ ಕ್ರಿಕೆಟ್ ಮಂಡಳಿಯು ತಮ್ಮನ್ನು ಸಂಪರ್ಕಿಸಿದೆ ಎಂಬ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್‌ಗಳಾದ ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಹೇಳಿಕೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶುಕ್ರವಾರ ತಳ್ಳಿ ಹಾಕಿದ್ದಾರೆ.
ಜೂನ್ 2ರಿಂದ ಪ್ರಾರಂಭವಾಗುವ ಟಿ-20 ವಿಶ್ವಕಪ್ ಮುಕ್ತಾಯದೊಂದಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮೇ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ದ್ರಾವಿಡ್ ಮೂಲ ಅಧಿಕಾರಾವಧಿಯು 2023ರ ಏಕದಿನ ವಿಶ್ವಕಪ್ಗೆ ಕೊನೆಗೊಂಡಿತ್ತು. ಆದರೆ, ಬಿಸಿಸಿಐ ಕೆರಿಬಿಯನ್ ದ್ವೀಪಗಳು ಮತ್ತು ಅಮೆರಿಕಾದಲ್ಲಿ ನಡೆಯಲಿರುವ ಮುಂಬರುವ ಟಿ-20 ವಿಶ್ವಕಪ್ವರೆಗೆ ವಿಸ್ತರಿಸಿದೆ. ಈಗ ದ್ರಾವಿಡ್ ಕೋಚ್ ಆಗಿ ಮುಂದುವರೆಯುವ ಆಸಕ್ತಿ ಹೊಂದಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದಾರೆ. ಇದೇ ವೇಳೆ, ಪಾಂಟಿಂಗ್ ಮತ್ತು ಲ್ಯಾಂಗರ್ ತಾವು ಕೋಚ್ ಆಫರ್ಅನ್ನು ತಿರಸ್ಕರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಜಯ್ ಶಾ ಸ್ಪಷ್ಟನೆ: ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ನಾನಾಗಲಿ ಅಥವಾ ಬಿಸಿಸಿಐ ಆಗಲಿ ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಕೋಚ್ ಹುದ್ದೆಯ ಆಫರ್‌ನೊಂದಿಗೆ ಸಂಪರ್ಕಿಸಿಲ್ಲ. ಕೆಲ ಮಾಧ್ಯಮ ವಿಭಾಗಗಳಲ್ಲಿ ಪ್ರಸಾರವಾಗಿರುವ ವರದಿಗಳು ಸಂಪೂರ್ಣವಾಗಿ ತಪ್ಪು ಎಂದು ತಿಳಿಸಿದ್ಧಾರೆ.